ವಿಜ್ಞಾನದ ವಿಸ್ಮಯಗಳನ್ನು ಮೀರಿ ನಿಂತ ದೇವರು

ಸಾವಿರ ವರ್ಷಗಳಿಂದ ತಲೆಯೆತ್ತಿ ನಿಂತಿರುವ ಈ ದೇವಾಲಯವು ಹಲವು ವಿಸ್ಮಯಗಳ ಮೂಟೆ

ನಮ್ಮ ಹಲವಾರು ಪುರಾತನ ದೇವಾಲಯಗಳು ಕೇವಲ ಅಧ್ಯಾತ್ಮದ ಕೇಂದ್ರಗಳು ಆಗಿರದೆ ನೂರಾರು ವಿಸ್ಮಯಗಳ ಮೂಟೆ ಆಗಿವೆ. ಅವುಗಳು ವಿಜ್ಞಾನದ ತತ್ವಗಳನ್ನು ಕೂಡ ಮೀರಿ ನಿಂತಿರುವುದು ನಿಜಕ್ಕೂ ನಮಗೆ ಅಚ್ಚರಿ ಮತ್ತು ವಿಭ್ರಮೆ ಮೂಡಿಸುತ್ತವೆ.
ಅದರಲ್ಲಿ ಕೂಡ ಪುರಿಯ ಜಗನ್ನಾಥ ದೇವಾಲಯ ನಮ್ಮ ಪೂರ್ವಜರ ವಾಸ್ತು ವೈಭವ, ವೈಜ್ಞಾನಿಕ ದೃಷ್ಟಿಕೋನ ಮತ್ತು ನಂಬಿಕೆಗಳ ಪಂಚಾಂಗದ ಮೇಲೆ ನಿಂತಿರುವುದು ನಿಜಕ್ಕೂ ಬೆರಗು ಮೂಡಿಸುತ್ತದೆ. ಒಂದೊಂದು ಸಂಗತಿಯನ್ನು ಗಮನಿಸುತ್ತ ಹೋದಂತೆ ನೀವು ಖಂಡಿತವಾಗಿಯೂ ಮೂಗಿನ ಮೇಲೆ ಬೆರಳು ಇಡುತ್ತೀರಿ.
ಒಡಿಶಾ ರಾಜ್ಯದ ಪೂರ್ವ ಕರಾವಳಿಯ ಸಮುದ್ರ ತೀರದಲ್ಲಿ ವಿಸ್ತಾರವಾಗಿ ಹರಡಿರುವ ಪುರಿಯ ಜಗನ್ನಾಥ ದೇವಾಲಯ ಹತ್ತನೇ ಶತಮಾನದಲ್ಲಿ ನಿರ್ಮಾಣವಾಯಿತು ಎನ್ನುತ್ತದೆ ಇತಿಹಾಸ. ಗಂಗ ವಂಶದ ಮೊದಲ ರಾಜನಾದ ಅನಂತವರ್ಮ ಚೋಡಗಂಗಾ ದೇವನು ಈ ದೇವಾಲಯವನ್ನು ನಿರ್ಮಿಸಿದ ಕೀರ್ತಿ ಹೊಂದಿದ್ದಾನೆ. ಸಾವಿರ ವರ್ಷಗಳಿಂದ ತಲೆಯೆತ್ತಿ ನಿಂತಿರುವ ಈ ಬೃಹತ್ ದೇವಾಲಯ ಭಾರತದ ಚತುರ್ ಧಾಮಗಳಲ್ಲಿ ಅತಿ ದೊಡ್ಡದು. ನಾಲ್ಕು ಲಕ್ಷ ಚದರ ಅಡಿಯಷ್ಟು ವಿಸ್ತೀರ್ಣ ಇರುವ ಮತ್ತು ಹೆಚ್ಚು ಕಡಿಮೆ 45 ಅಂತಸ್ತುಗಳಷ್ಟು ಎತ್ತರವಿರುವ ಈ ದೇವಾಲಯದ ವಾಸ್ತು ತುಂಬಾ ಅದ್ಭುತವಾಗಿದೆ. ಇಲ್ಲಿನ ವಿಶೇಷ ಎಂದರೆ ಮುಖ್ಯ ದೇವರು ಜಗನ್ನಾಥ. ಅದರ ಜೊತೆಗೆ ಬಲರಾಮ ಮತ್ತು ಸುಭದ್ರೆಯರು ಇಲ್ಲಿ ಪೂಜೆಯನ್ನು ಪಡೆಯುತ್ತಾರೆ. ಅಂದರೆ ಇಬ್ಬರು ಅಣ್ಣಂದಿರು ಮತ್ತು ತಂಗಿ ಸುಭದ್ರೆಯು ಪೂಜೆಗೊಳ್ಳುವುದು ವಿಶೇಷ. ಇಲ್ಲಿ ಕೃಷ್ಣನ ಯಾವ ಪತ್ನಿಯ ಮೂರ್ತಿ ಇಲ್ಲ.

ಮೂರೂ ವಿಗ್ರಹಗಳು ಬೇವಿನ ಮರಗಳಿಂದ ಆಗಿವೆ































 
 

ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳು ಸಾಮಾನ್ಯವಾಗಿ ಲೋಹಗಳಿಂದ ಅಥವಾ ಶಿಲೆಗಳಿಂದ ಕೆತ್ತಲ್ಪಟ್ಟಿರುತ್ತವೆ. ಆದರೆ ಇಲ್ಲಿ ಇರುವ ಮೂರೂ ವಿಗ್ರಹಗಳು ಪವಿತ್ರವಾದ ಬೇವಿನ ಮರಗಳಿಂದ ಕೆತ್ತಲ್ಪಟ್ಟಿವೆ. ಆಶ್ಚರ್ಯ ಏನೆಂದರೆ ಆ ವಿಗ್ರಹಗಳನ್ನು ಹನ್ನೆರಡು ವರ್ಷಗಳ ನಂತರ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಿ ಮತ್ತೆ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ನಿತ್ಯವೂ ದೇವರಿಗೆ ತಣ್ಣೀರಿನ ಅಭಿಷೇಕ ಮಾಡುವ ಕಾರಣ ದೇವರಿಗೆ ನೆಗಡಿ ಮತ್ತು ಜ್ವರವು ಬರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದಕ್ಕಾಗಿ ವರ್ಷಕ್ಕೆ ಹದಿನೈದು ದಿನಗಳ ಕಾಲ ದೇವರ ವಿಗ್ರಹಗಳನ್ನು ರಹಸ್ಯ ಜಾಗದಲ್ಲಿ ಇರಿಸಿ ಭಕ್ತರಿಗೆ ಪ್ರವೇಶವನ್ನು ನಿರಾಕರಿಸುತ್ತಾರೆ. ಆ ಹೊತ್ತಲ್ಲಿ ಶುಶ್ರೂಷೆ ಮಾಡಲು ವೈದ್ಯರು ಕೂಡ ಬಂದು ದೇವರಿಗೆ ಆರೋಗ್ಯ ಸೇವೆ ನೀಡುತ್ತಾರೆ.

ಜಗನ್ನಾಥ ದೇವರ ರಥೋತ್ಸವವು ಕೂಡ ಅದ್ಭುತ

ಪುರಿಯ ಜಗನ್ನಾಥ ದೇವಾಲಯದ ಮೂರು ಮೂರ್ತಿಗಳನ್ನು ಮೂರು ಪ್ರತ್ಯೇಕ ಮರದ ರಥದಲ್ಲಿ ಕುಳ್ಳಿರಿಸಿ ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ಇಲ್ಲಿ ರಥಯಾತ್ರೆ ಮಾಡುತ್ತಾರೆ. ಈ ರಥೋತ್ಸವಕ್ಕೆ ಪ್ರತಿ ವರ್ಷ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು ಅದು ಉತ್ತರ ಭಾರತದ ಅತಿ ದೊಡ್ಡ ಉತ್ಸವಗಳಲ್ಲಿ ಒಂದು ಎಂದು ಕೀರ್ತಿ ಪಡೆದಿದೆ. ಸುಮಾರು 45 ಅಡಿ ಎತ್ತರವಾದ ಈ ರಥಗಳನ್ನು ಪ್ರತಿ ವರ್ಷವೂ ಹೊಸದಾಗಿ ನಿರ್ಮಿಸುವುದು ತುಂಬಾನೇ ವಿಶೇಷ. ಪುರಿಯ ಬೇರೆ ಬೇರೆ ಭಾಗಗಳಿಂದ ಕಲಾವಿದರು ದೇವಾಲಯಕ್ಕೆ ಬಂದು ಅಲ್ಲಿಯೇ ವಾಸ್ತವ್ಯ ಮಾಡಿ ಎರಡು ತಿಂಗಳ ಅವಧಿಯಲ್ಲಿ ಈ ರಥಗಳನ್ನು ಕೆತ್ತುವುದು ವಿಶೇಷ.

ನೂರಾರು ನಂಬಿಕೆಗಳು, ಆಚರಣೆಗಳು ಮತ್ತು ವಿಜ್ಞಾನ ಮೀರಿದ ವಿಸ್ಮಯಗಳು

ಪುರಿ ಜಗನ್ನಾಥ ದೇವಾಲಯದಲ್ಲಿ ಇರುವ ಅಪೂರ್ವ ನಂಬಿಕೆಗಳು, ವಿಶೇಷ ಆಚರಣೆಗಳು ಒಂದೆಡೆ ಆದರೆ, ಆಧುನಿಕ ವಿಜ್ಞಾನ ಲೋಕವನ್ನು ಮೆಟ್ಟಿ ನಿಲ್ಲುವ ಹತ್ತಾರು ವಿಸ್ಮಯಗಳು ಬೆರಗು ಮೂಡಿಸುವುದು ಇನ್ನೊಂದೆಡೆ. ಅವುಗಳಲ್ಲಿ ಕೆಲವನ್ನು ನಾನಿಲ್ಲಿ ಉಲ್ಲೇಖ ಮಾಡುತ್ತೇನೆ.

1) ದೇವಾಲಯದ ಮೇಲೆ ಒಂದು ಬಾವುಟ ಹಾರುತ್ತಿದ್ದು ಅದನ್ನು ಪುರೋಹಿತರು ದಿನವೂ 45 ಅಂತಸ್ತುಗಳಷ್ಟು ಮೇಲಕ್ಕೇರಿ ಬದಲಾಯಿಸುತ್ತಾರೆ. ಬಿಸಿಲು, ಗಾಳಿ, ಮಳೆ, ಸುಂಟರಗಾಳಿ ಯಾವುದು ಎದುರಾದರೂ ಈ ಬಾವುಟ ಬದಲಾಯಿಸುವ ಪದ್ಧತಿ ಒಂದು ದಿನವೂ ನಿಂತಿಲ್ಲ. ಹಾಗೇನಾದರೂ ನಿಂತರೆ ಪ್ರಾಯಶ್ಚಿತ್ತ ರೂಪವಾಗಿ ಮುಂದೆ ಹದಿನೆಂಟು ವರ್ಷಗಳ ಅವಧಿಯಲ್ಲಿ ದೇವಾಲಯ ಮುಚ್ಚಬೇಕು ಎನ್ನುವ ಸಂಪ್ರದಾಯ ಅಲ್ಲಿದೆ. ಇನ್ನೂ ಆಶ್ಚರ್ಯ ಎಂದರೆ ಈ ಬಾವುಟ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತಿದೆ ಅನ್ನುವುದು.

2) ದೇವಾಲಯದ ಮೇಲೆ ಬಹಳ ಎತ್ತರದ ಒಂದು ಗುಮ್ಮಟವಿದ್ದು ದಿನದ ಯಾವ ಅವಧಿಯಲ್ಲಿಯೂ ಅದರ ನೆರಳು ನೆಲದ ಮೇಲೆ ಬೀಳುವುದಿಲ್ಲ ಅನ್ನುವುದು ಇನ್ನೊಂದು ವಿಸ್ಮಯ.

3) ಗುಮ್ಮಟದ ಮೇಲೆ ಇದುವರೆಗೆ ಯಾವ ಪಕ್ಷಿ ಅಥವಾ ವಿಮಾನವು ಹಾರಿಲ್ಲ ಅನ್ನುವುದು ಆಶ್ಚರ್ಯದ ಸಂಗತಿ, ಆದರೂ ಸತ್ಯ.

4) ದೇವಳದ ಮೇಲೆ ಒಂದು 12 ಅಡಿ ಎತ್ತರದ ಮತ್ತು ಒಂದು ಟನ್ ತೂಕದ ಒಂದು ಸುದರ್ಶನ ಚಕ್ರ ಇದ್ದು ಅದು ಪುರಿ ನಗರದ ಯಾವ ಬಿಂದುವಿನಲ್ಲಿ ನಿಂತರೂ ಅದು ಒಂದೇ ರೀತಿ ಕಾಣುತ್ತದೆ. ಸಾವಿರ ವರ್ಷಗಳ ಹಿಂದೆ ಅಷ್ಟೊಂದು ಭಾರವಾದ ಆ ಚಕ್ರವನ್ನು ಅಷ್ಟು ಎತ್ತರದಲ್ಲಿ ಹೇಗೆ ಸ್ಥಾಪಿಸಿದರು ಅನ್ನುವುದೇ ಒಂದು ಅಚ್ಚರಿ.

5) ದೇವಾಲಯದ ಪಕ್ಕದಲ್ಲಿ ಸಮುದ್ರ ಇದ್ದು ಅದರ ಅಲೆಗಳ ಶಬ್ದವು ಕಿವಿ ತುಂಬುತ್ತದೆ. ಆದರೆ ದೇವಾಲಯದ ಪ್ರಮುಖ ದ್ವಾರವನ್ನು ದಾಟಿ ಒಳಗೆ ಹೋದಂತೆ ಆ ಅಲೆಗಳ ಶಬ್ದವು ಕೇಳುವುದೇ ಇಲ್ಲ. ಯಾವ ಸೌಂಡ್ ಪ್ರೂಫ್ ತಂತ್ರಜ್ಞಾನದಿಂದ ದೇವಾಲಯದ ಗೋಡೆಗಳನ್ನು ಕಟ್ಟಿದ್ದಾರೆ ಅನ್ನುವುದು ನಿಜಕ್ಕೂ ಅದ್ಭುತ.

6) ದೇವಾಲಯ ಸ್ಥಾಪನೆ ಆಗಿ ಸಾವಿರ ವರ್ಷಗಳ ಅವಧಿಯಲ್ಲಿ ನೂರಾರು ಸುನಾಮಿ, ಭೂಕಂಪ ಹಾಗೂ ಪ್ರಾಕೃತಿಕ ವೈಪರೀತ್ಯಗಳು ಸಂಭವಿಸಿವೆ. ಒಮ್ಮೆಯಂತೂ ತೀವ್ರವಾಗಿ ಬೀಸಿದ ಒಂದು ಸೈಕ್ಲೋನ್ ಇಡೀ ಒಡಿಶಾ ರಾಜ್ಯವನ್ನು ಮತ್ತು ಪುರಿ ನಗರವನ್ನು ಅಲ್ಲಾಡಿಸಿಬಿಟ್ಟಿತ್ತು. ಆದರೆ ದೇವಾಲಯದ ಒಂದು ಇಟ್ಟಿಗೆಯು ಕೂಡ ಅಲುಗಾಡಿಲ್ಲ.

7) ಇನ್ನೊಂದು ಅಚ್ಚರಿ ಎಂದರೆ ಅಲ್ಲಿಯ ಮಧ್ಯಾಹ್ನದ ಸಂತರ್ಪಣೆಯದ್ದು. ದಿನವೂ ಎರಡು ಸಾವಿರದಿಂದ ಎರಡು ಲಕ್ಷ ಮಂದಿ ಅಲ್ಲಿ ಪ್ರಸಾದ ಸ್ವೀಕಾರ ಮಾಡುತ್ತಾರೆ. ಆದರೆ ಒಮ್ಮೆಯೂ ಸಿದ್ಧಪಡಿಸಿದ ಪ್ರಸಾದ ಕೊರತೆ ಆಗಿಲ್ಲ ಅನ್ನೋದು ಜಗನ್ನಾಥನ ಕೃಪೆ ಎನ್ನಬಹುದು. ಹಾಗೆಯೇ ಒಂದು ಅಗುಳು ಅನ್ನ ಕೂಡ ಉಳಿಯುವುದಿಲ್ಲ ಅನ್ನುವುದು ಇನ್ನೂ ದೊಡ್ಡ ಅಚ್ಚರಿ.

8) ಏಳು ಮಡಿಕೆಗಳನ್ನು ಒಂದರ ಮೇಲೆ ಒಂದಿಟ್ಟು ಕೇವಲ ಕಟ್ಟಿಗೆ ಉಪಯೋಗ ಮಾಡಿ ಮುಖ್ಯ ಪ್ರಸಾದ ಸಿದ್ಧ ಮಾಡುವುದು ಅಲ್ಲಿನ ಸಂಪ್ರದಾಯ. ಆಗ ಮೇಲಿನ ಮಡಕೆಯು ಮೊದಲು ಕುದಿಯುವುದನ್ನು ನೀವು ಇಲ್ಲಿ ಮಾತ್ರ ನೋಡಬಹುದು!

9) ಪುರಿ ಜಗನ್ನಾಥ ಮತ್ತು ಇತರ ಎರಡು ಮೂರ್ತಿಗಳು ಈಗಾಗಲೇ ಹೇಳಿದ ಹಾಗೆ ಮರಗಳಿಂದ ಕೆತ್ತಲ್ಪಟ್ಟವು. ಆ ಮೂರ್ತಿಗಳ ಕಣ್ಣುಗಳ ಜಾಗದಲ್ಲಿ ದೊಡ್ಡ ದೊಡ್ಡ ರಂಧ್ರಗಳು ಇವೆ. ಕೈ ಕಾಲುಗಳು ಕೂಡ ವಿಕಾರ ಆಗಿವೆ. ಆದರೆ ಕಾರ್ಣಿಕದ ವಿಷಯಕ್ಕೆ ಬಂದರೆ ಪುರಿ ಜಗನ್ನಾಥನಿಗೆ ಉಪಮೆ ಅವನೇ ಆಗಿದ್ದಾನೆ. ಆತನ ಆಂತರಿಕ ಸೌಂದರ್ಯವನ್ನು ಭಕ್ತರು ಫೀಲ್ ಮಾಡುತ್ತಾರೆ.

10) ಸಾಮಾನ್ಯವಾಗಿ ಸಮುದ್ರದ ಕಡೆಯಿಂದ ತಂಗಾಳಿಯು ಬೆಳಿಗ್ಗಿನ ಹೊತ್ತು ಭೂಮಿಯ ಕಡೆಗೆ ಬೀಸ ಬೇಕು. ಸಂಜೆ ಹೊತ್ತು ತಂಗಾಳಿಯು ಭೂಮಿಯಿಂದ ಸಮುದ್ರದ ಕಡೆಗೆ ಬೀಸಬೇಕು. ಆದರೆ ಇಲ್ಲಿ ಅದು ಉಲ್ಟಾ ದಿಕ್ಕಿನಲ್ಲಿ ಬೀಸುತ್ತಿದೆ ಅನ್ನೋದು ವಿಸ್ಮಯದ ಪರಾಕಾಷ್ಠೆ.

ಭರತವಾಕ್ಯ

ಜಗನ್ನಾಥ ದೇವಾಲಯವನ್ನು ನಿರ್ಮಿಸುವಾಗ ಸಾವಿರ ವರ್ಷಗಳ ಹಿಂದೆ ಅಂತಹ ಭೌಗೋಳಿಕ ವಿಸ್ಮಯಗಳು ಅಡಕವಾಗಿರುವ ಎತ್ತರದ ಸ್ಥಳವನ್ನು ಅರಸರು ಆರಿಸಿದ ಕಾರಣ ಈ ವಿಸ್ಮಯಗಳು ಉಂಟಾಗಿರಬಹುದು ಎಂಬ ಊಹೆಯನ್ನು ಬಿಟ್ಟರೆ ನಿಮಗೆ, ನಮಗೆ ಬೇರೆ ಯಾವ ವಿಜ್ಞಾನದ ಆಧಾರವೂ ಪುರಿಯಲ್ಲಿ ದೊರಕುವುದಿಲ್ಲ. ಇಲ್ಲಿ ವಿಜ್ಞಾನಕ್ಕಿಂತ ಜನರ ನಂಬಿಕೆ ಗಾವುದ ಮುಂದಿದೆ. ಇದೆಲ್ಲವೂ ಜಗನ್ನಾಥ ದೇವರ ಕೃಪೆ ಎಂದು ನಾವು ಹೇಳಿ ಕೈ ಮುಗಿಯಬೇಕು ಅಷ್ಟೇ.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top