ಪುತ್ತೂರು: ಪುತ್ತೂರು ಜಿಲ್ಲೆಯಾಗಿ ಪರಿವರ್ತಿಸಲು ಎಲ್ಲಾ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಪು್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಹೇಳಿದರು.
ಅವರು ವಿಟ್ಲದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪುತ್ತೂರು ಕೇಂದ್ರೀಕೃತವಾಗಿ ನೂತನ ಜಿಲ್ಲೆಯ ಕನಸು ಈ ಭಾಗದಲ್ಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದ ಅವರು, ಕಳೆದ ಐದು ವರ್ಷಗಳಲ್ಲಿ ರಾಜ್ಯದ ಡಬಲ್ ಇಂಜಿನ್ ಸರಕಾರದ ಸಾಧನೆಗಳು ಬಿಜೆಪಿಗೆ ಶ್ರೀರಕ್ಷೆಯಾಗಲಿದ್ದು, ಶಾಸಕ ಸಂಜೀವ ಮಠಂದೂರು ಅವರು ಒಂದೂವರೆ ಸಾವಿರ ಕೋಟಿ ಅನುದಾನ ತಂದಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರವಾಗಿ ಮಾಡುವಲ್ಲಿ ಪ್ರಯತ್ನ ಮಾಡುತ್ತೇನೆ. ಪುತ್ತೂರು ಬಿಜೆಪಿ ಭದ್ರ ಕೋಟೆಯಾಗಿದ್ದು, ಪ್ರತೀ ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ ಎಂದು ಹೇಳಿದರು.
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಪುತ್ತೂರಿಗೆ ಎಸ್ಪಿ ಕಚೇರಿ ಸ್ಥಳಾಂತರ, ಮಾಣಿ-ಮೈಸೂರು ಚತುಷ್ಪಥ ಯೋಜನೆಯನ್ನು ತ್ವರಿತವಾಗಿ ನಡೆಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಟ್ಲ ಅರಮನೆ ಅರಸರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಪೆರುವಾಯಿ, ಮಾಣಿಲ, ಅಳಿಕೆ, ಪುಣಚ, ವಿಟ್ಲ ಮುಡ್ನೂರು, ಇಡ್ಕಿದು, ಕುಳ ಗ್ರಾಮಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿದ್ದು, ಮಹಿಳೆಯರಿಗೆ ಶಕ್ತಿ ತುಂಬಲು ಈ ಬಾರಿ ಪಕ್ಷ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ವಿಧಾನಸಭೆಯಲ್ಲಿ ಪ್ರತಿನಿಧಿಸಲು ಅವಕಾಶ ನೀಡಬೇಕೆಂದು ಅವರು ಮತದಾರರಲ್ಲಿ ವಿನಂತಿಸಿದರು.
ಸಭೆಯಲ್ಲಿ ಶಾಸಕ ಸಂಜೀವ ಮಠಂಧೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಒಬಿಜಿ ಮೋರ್ಚಾದ ಆರ್.ಸಿ.ನಾರಾಯಣ, ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು, ಹರಿಪ್ರಸಾದ್ ಯಾದವ್, ಸುನಿಲ್ ದಡ್ಡು ಉಪಸ್ಥಿತರಿದ್ದರು.