ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳ ಪೂರಕ ಪರೀಕ್ಷೆಗೆ ಸೂಚನೆ

ಬೆಂಗಳೂರು : 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಶೇ.74.64 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನೂ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಮೂಲಕ ಪರೀಕ್ಷೆ ಬರೆದು ಉತ್ತೀರ್ಣವಾಗಲು ಅವಕಾಶವಿದೆ. ಅದರಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪೂರಕ ಪರೀಕ್ಷೆಯ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿದೆ.

2023ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ, ಅರ್ಜಿ ಕೊನೆಯ ದಿನ, ಶುಲ್ಕದ ಬಗ್ಗೆ ಸಂಪೂರ್ಣ ಮಾಹಿತಿಯಿರುವ ಸುತ್ತೋಲೆಯೊಂದನ್ನ ಹೊರಡಿಸಿದೆ. ಪುನರಾವರ್ತಿತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಕುರಿತು ಮಂಡಲಿ ಹೊರಡಿಸಿರುವ ಸುತ್ತೋಲೆಯಲ್ಲಿ, 2023ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಎಲ್ಲಾ ಕಾಲೇಜಿನ ಪ್ರಾಂಶುಪಾಲರುಗಳು ಈ ಸುತ್ತೋಲೆಯನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಆದೇಶಿಸಿದೆ.

ಮಾರ್ಚ್‌ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಅನುತ್ತೀರ್ಣ ಅಂಕಪಟ್ಟಿ ಅರ್ಜಿ ಎಂ ಸಿ ಎ ಗಳನ್ನು ಮಂಡಲಿಯಿಂದ ನೀಡಲಾಗುವುದಿಲ್ಲ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ನೀಡಲಾಗುವ ಫಲಿತಾಂಶ ಪಟ್ಟಿಯ ಆಧಾರದ ಮೇಲೆ ಪೂರಕ ಪರೀಕ್ಷೆ ನೋಂದಾಯಿಸಿಕೊಂಡು ಪರೀಕ್ಷಾ ಶುಲ್ಕ ಸ್ವೀಕರಿಸಿ ಮಂಡಲಿಯ PU EXAM ಲಾಗಿನ್‌ನಲ್ಲಿ ವಿದ್ಯಾರ್ಥಿಯ ಮಾಹಿತಿಯನ್ನು ಭರ್ತಿ ಮಾಡುವಂತೆ ತಿಳಿಸಿದೆ.































 
 

2023ನೇ ಸಾಲಿಗಿಂತ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಮೂಲ ಅನುತ್ತೀರ್ಣ ಅಂಕಪಟ್ಟಿ/ ಅರ್ಜಿ ಅಥವಾ ಹಿಂದಿನ ಎಂ ಸಿ ಎ ಗಳ ಆಧಾರದ ಮೇಳೆ ಪರೀಕ್ಷೆ ಶುಲ್ಕಗಳನ್ನು ಸ್ವೀಕರಿಸಿ ಮಂಡಲಿಯ PU EXAM ಲಾಗಿನ್‌ನಲ್ಲಿ ವಿದ್ಯಾರ್ಥಿಯ ಮಾಹಿತಿಯನ್ನು ಭರ್ತಿ ಮಾಡುವುದು.

ಆಗಸ್ಟ್ 2022ರಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಾಗೂ 2023ನೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಫಲಿತಾಂಶ ತಿರಸ್ಕರಿಸಿ 2023ರ ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ, ಅಂತಹ ವಿದ್ಯಾರ್ಥಿಗಳು ಮೂಲ ಅಂಕಪಟ್ಟಿ/ಫಲಿತಾಂಶ ಪಟ್ಟಿಗಳ ಆಧಾರದ ಮೇಲೆ ನಿಯಮಾನುಸಾರ ಫಲಿತಾಂಶ ತಿರಸ್ಕರಣೆಗೆ ಅರ್ಜಿಯನ್ನು ಇಲಾಖೆಗೆ ಸಲ್ಲಿಸಬೇಕು. ಇಲಾಖೆಯು ಅನುಮತಿ ನೀಡಿದ ನಂತರ PU EXAM ಲಾಗಿನ್‌ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ ಮಾಹಿತಿಯನ್ನ ದಾಖಲಿಸುವಂತೆ ಪ್ರಾಂಶುಪಾಲರಿಗೆ ಸೂತ್ತೋಲೆಯಲ್ಲಿ ತಿಳಿಸಲಾಗಿದೆ.

2023ರಲ್ಲಿ ನಡೆಸಲಾಗುವ ಪೂರಕ ಪರೀಕ್ಷೆಗೆ ಪುನರಾವರ್ತಿತ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕಗಳ ವಿವರ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳು ಪಾವತಿಸಬೇಕಾದ ಪರೀಕ್ಷಾ ಶುಲ್ಕ,
ಒಂದು ವಿಷಯಕ್ಕೆ-140 ರೂಪಾಯಿ.
ಎರಡು ವಿಷಯಕ್ಕೆ- 270 ರೂಪಾಯಿ.
ಮೂರು ಅಥವಾ ಹೆಚ್ಚಿನ ವಿಷಯಗಳು- 400 ರೂಪಾಯಿ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ಪಡೆಯಬೇಕಾದ ಅಂಕಪಟ್ಟಿ ಶುಲ್ಕ- 50 ರೂಪಾಯಿ.

ಪಿಯುಸಿ ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಇಲ್ಲಿವೆ ಬೆಸ್ಟ್‌ ಕೋರ್ಸ್‌ಗಳು

ಪರೀಕ್ಷಾ ತಿರಸ್ಕರಣಾ ಶುಲ್ಕ
ಪ್ರಥಮ ಬಾರಿಗೆ ಒಂದು ವಿಷಯಕ್ಕೆ- 175 ರೂಪಾಯಿ.
ದ್ವಿತೀಯ ಅಂದರೆ ಅಂತಿಮ ಬಾರಿಗೆ ಒಂದು ವಿಷಯಕ್ಕೆ- 350 ರೂಪಾಯಿ.

2023ರಲ್ಲಿ ನಡೆಸಲಾಗುವ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕವನ್ನ ನಿಗದಿಪಡಿಸಲಾಗಿದೆ. ದಂಡರಹಿತವಾಗಿ, ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ 26-04-2023 ರವರೆಗೆ ಪರೀಕ್ಷಾ ಶುಲ್ಕವನ್ನು ಕಟ್ಟಬಹುದಾಗಿದೆ. ಈ ಶುಲ್ಕವನ್ನು ಪ್ರಾಂಶುಪಾಲರು ಒಂದೇ ಕಂತಿನಲ್ಲಿ ಖಜಾನೆಗೆ 27-04-2023 ರೊಳಗೆ ಪಾವತಿಸಬೇಕು.

ದಂಡಸಹಿತ, ಅಂದರೆ ದಿನಕ್ಕೆ ಐವತ್ತು ರೂಪಾಯಿಯಂತೆ 27-04-2023 ರಿಂದ 02-05-2023 ವರೆಗೆ ಶುಲ್ಕವನ್ನು ಪಾವಿತಸಬಹುದಾಗಿದೆ. ಈ ಶುಲ್ಕವನ್ನು ಪ್ರಾಂಶುಪಾಲರು ಒಂದೇ ಕಂತಿನಲ್ಲಿ ಖಜಾನೆಗೆ 03-05-2023 ರೊಳಗೆ ಪಾವತಿಸಬೇಕು.

ಪ್ರಾಂಶುಪಾಲರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್‌ ಸಹಿತ ಜಿಲ್ಲಾ ಉಪನಿರ್ದೇಶಕರ ಕಛೇರಿಗೆ ಕಡ್ಡಾಯವಾಗಿ ದಂಡರಹಿತ ಅರ್ಜಿಗಳನ್ನ 28-04-2023 ರೊಳಗೆ ಸಲ್ಲಿಸಬೇಕು. ದಂಡಸಹಿತ ಅರ್ಜಿಗಳನ್ನ 04-05-2023 ರೊಳಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಪ್ರಾಂಶುಪಾಲರಿಗೆ ತಿಳಿಸಿದೆ.

ಜಿಲ್ಲಾ ಉಪ ನಿರ್ದೇಶಕರು ಪ್ರಾಂಶುಪಾಲರಿಂದ ಸ್ವೀಕರಿಸಿದ ಪರೀಕ್ಷಾ ಅರ್ಜಿಗಳನ್ನು ಪರಿಶೀಲಿಸಿ, ದಂಡರಹಿತ ಅರ್ಜಿಗಳನ್ನು29-04-2023 ರೊಳಗೆ, ಹಾಗೂ ದಂಡ ಸಹಿತ ಅರ್ಜಿಗಳನ್ನು 05-05-2023ರೊಳಗಾಗಿ ಮಂಡಲಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top