ಬೆಂಗಳೂರು : ಬಹುನಿರೀಕ್ಷಿತ ‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್ ಆ್ಯಪ್ ಕೊನೆಗೂ ಬಿಡುಗಡೆಯಾಗಿದೆ. ಆ್ಯಪ್ ಬಳಸಿಕೊಂಡು ಇನ್ನು ಮುಂದೆ ಬೆಂಗಳೂರಿಗರು ಬಿಎಂಟಿಸಿ ಬಸ್’ಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ.
ಈ ಆ್ಯಪ್ ಅನ್ನು ಬುಧವಾರ ರಾತ್ರಿ ಲೈವ್ ಮಾಡಲಾಗಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ್ಯಪ್ ಬೀಟಾ ಪರೀಕ್ಷೆಯ ಹಂತದಲ್ಲಿದ್ದಾಗ ಅದನ್ನು ‘ನಿಮ್ ಬಸ್’ ಎಂದು ಕರೆಯಲಾಗುತ್ತಿತ್ತು. ಇದೀಗ ಲೈವ್ ಮಾಡುವ ವೇಳೆ ಅದನ್ನು ‘ನಮ್ಮ ಬಿಎಂಟಿಸಿ’ ಎಂದು ಹೆಸರಿಸಲಾಗಿದೆ. ‘ನಮ್ಮ ಬಿಎಂಟಿಸಿ’ ಆ್ಯಪ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ. ಭಾಷೆ ಬದಲಾಯಿಸಲು ಸರಳವಾದ ಆಯ್ಕೆಯನ್ನೂ ನೀಡಲಾಗಿದೆ.
ಈ ಹಿಂದೆ ಸಾರಿಗೆ ನಿಗಮವು ಚುನಾವಣೆ ನಂತರ ಆ್ಯಪ್ ಬಿಡುಗಡೆ ಮಾಡಲು ಚಿಂತನೆ ನಡೆಸಿತ್ತು. ಆದರೆ, ಈಗಾಗಲೇ ಹಲವಾರು ಬಾರಿ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದರಿಂದ ಕೊನೆಗೂ ಇದೀಗ ಆ್ಯಪ್ ಬಿಡುಗಡೆ ಮಾಡಿದೆ. ಆ್ಯಪ್ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಆ್ಯಪ್ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.
ಬಾಲಚಂದರ್ ಎ ಎಂಬ ಟೆಕ್ಕಿ ಅವರು ಮಾತನಾಡಿ, ಪ್ರಯಾಣಿಸಲು ಬಯಸುವ ಮಾರ್ಗದ ಆಯ್ಕೆಯನ್ನು ಆ್ಯಪ್ ತೋರಿಸುತ್ತಿಲ್ಲ. ಮಾನ್ಯತಾದಿಂದ ಹೆಬ್ಬಾಳದ ಮೂಲಕ ಮೆಜೆಸ್ಟಿಕ್‌ಗೆ ಹೋಗಲು ಬಯಸಿದರೆ ಆ್ಯಪ್ ಬಸ್ ಮಾರ್ಗವನ್ನು ತೋರಿಸುತ್ತಿಲ್ಲ. ಹೆಣ್ಣೂರು ಕ್ರಾಸ್ ಮತ್ತು ನಾಗವಾರದ ಮೂಲಕ ಹೋಗುವ ಬಸ್‌ಗಳನ್ನು ತೋರಿಸುತ್ತಿದೆ. ಇದು ದೂರದ ಮಾರ್ಗವಾಗಿಲೆ. ಆ್ಯಪ್ ಲಭ್ಯವಿರುವ ಎಲ್ಲಾ ಬಸ್ ಮಾರ್ಗಗಳನ್ನು ತೋರಿಸಬೇಕು. ಮಾರ್ಗಗಳ ಆಯ್ಕೆ ಮಾಡುವ ಆಯ್ಕೆಯನ್ನು ನೀಡಬೇಕು. ಅಪ್ಲಿಕೇಶನ್ 1.5 ಕಿಮೀ ದೂರದಲ್ಲಿರುವ ಆಯ್ಕೆಗಳನ್ನು ಮಾತ್ರ ತೋರಿಸುತ್ತದೆ, ”ಎಂದು ಆ್ಯಪ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಆ್ಯಪ್ ನಲ್ಲಿ ಗ್ರಾಫಿಕ್ಸ್ ಉತ್ತಮವಾಗಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಟಿಕೆಟ್ ಮತ್ತು ಪಾಸ್ ಖರೀದಿಗೂ ಅವಕಾಶ ಕಲ್ಪಿಸಬೇಕು. ಪಾಸ್ ಹಾಗೂ ಟಿಕೆಟ್ ಖರೀದಿಗೆ ಮತ್ತೊಂದು ಆ್ಯಪ್ ಬದಲು ಒಂದೇ ಆ್ಯಪ್ ನಲ್ಲಿ ಉಪಯೋಗಗಳನ್ನು ನೀಡಬೇಕು ಎಂದು ಸಲಹೆ ನೀಡಿದ್ದಾರೆ.