ಬೆಂಗಳೂರು : ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕರ ಪಟ್ಟಿಯಲ್ಲಿ ಉತ್ತರ ಪ್ರದೇಶದ ಇಮ್ರಾನ್ ಪ್ರತಾಪ್ ಗಡಿಯಾ ಹೆಸರಿದ್ದು, ಈತ ಇತ್ತೀಚೆಗೆ ಹತ್ಯೆಯಾದ ‘ಗ್ಯಾಂಗ್‌ಸ್ಟರ್’ ಅತೀಕ್ ಅಹ್ಮದ್‌ನ ಆತ್ಮೀಯ ಸ್ನೇಹಿತ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ದೂರಿದರು.
‘ಈ ಮೂಲಕ ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ದೇಶ ದ್ರೋಹಿಗಳು ಮತ್ತು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.‘ಅತೀಕ್ ಅಹ್ಮದ್ ತನ್ನ ಗುರುವೆಂದು ಹೇಳುತ್ತಿದ್ದುದು ಮಾತ್ರವಲ್ಲದೆ ಅತೀಕ್ ಕುರಿತಾಗಿ ಶಾಯರಿಗಳನ್ನೂ ಇಮ್ರಾನ್ ಬರೆಯುತ್ತಿದ್ದ. ಇಮ್ರಾನ್ ಕಾರ್ಯಕ್ರಮಗಳಲ್ಲಿ ಅತೀಕ್ ಭಾಗವಹಿಸುತ್ತಿದ್ದ. ಇಮ್ರಾನ್ ಶಾಯರಿಗಳಲ್ಲಿ ದೇಶ ದ್ರೋಹ, ಸಮಾಜ ವಿರೋಧಿ ಮತ್ತು ಹಿಂದೂಗಳ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವ ಅಂಶಗಳಿವೆ. ಈ ವ್ಯಕ್ತಿಯನ್ನು ಮಹಾರಾಷ್ಟ್ರಕ್ಕೆ ಕರೆತಂದು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿ ಕಾಂಗ್ರೆಸ್ ಪಾಪದ ಕೆಲಸ ಮಾಡಿದೆ’ ಎಂದು ದೂರಿದರು.ಅತೀಕ್ ಅಹ್ಮದ್ ಮೇಲೆ ವಿವಿಧ ರೀತಿಯ 102 ಪ್ರಕರಣಗಳಿದ್ದವು. ಇಂತಹ ಅಪರಾಧಿಗೆ ಇಮ್ರಾನ್ ತನ್ನ ಮನೆಯಲ್ಲಿ ಆತಿಥ್ಯ ನೀಡುತ್ತಿದ್ದ ಎಂದು ಶೋಭಾ ಹೇಳಿದರು