ವಾಹನ ಖರೀದಿಯಲ್ಲಿ ಅಕ್ರಮ : ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕ ಆಪ್ ಆಗ್ರಹ

ಬೆಂಗಳೂರು : ಬಿಬಿಎಂಪಿಯ 166 ಹುದ್ದೆಗಳ ವಾಹನ ಖರೀದಿಯಲ್ಲಿ ಅಕ್ರಮವಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ತನಿಖೆ ನಡೆಸಬೇಕೆಂದು ಆಮ್‌ ಆದ್ಮಿ ಪಕ್ಷ ಗುರುವಾರ ಆಗ್ರಹಿಸಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಮ್‌ ಆದ್ಮಿ ಪಕ್ಷದ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಅವರು, ಅಕ್ರಮದ ತನಿಖೆ ನಡೆದು ಸತ್ಯ ಹೊರಬರಬೇಕಿದೆ ಎಂದು ಹೇಳಿದರು.
“ಬಿಬಿಎಂಪಿಯು ಹೊರಡಿಸಿರುವ ಆದೇಶದ ಪ್ರಕಾರ 2017-18ರಿಂದ 166 ಹುದ್ದೆಗಳನ್ನು ಅಲಂಕರಿಸಿದ ವ್ಯಕ್ತಿಗಳಿಗೆ, ಬಿಬಿಎಂಪಿಯು ವಾಹನಗಳನ್ನು ಪೂರೈಸುತ್ತಿದೆ. ಆದರೆ, ಈ ಪೈಕಿ ಶೇ. 90ರಷ್ಟು ಜನರಿಗೆ ವಾಹನ ವಿತರಿಸಿಲ್ಲ. ಇದು 223 ಕೋಟಿ ಹಣ ರೂ. ಮೊತ್ತದ ಯೋಜನೆಯಾಗಿದ್ದು, ಈ ಹಣ ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ತನಖೆಯಾಗಬೇಕು. ಚುನಾವಣಾ ಆಯೋಗ ಈ ಬಗ್ಗೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.

“ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ಜಾತಿಗೆ ಸೇರಿದ ಪ್ರಹ್ಲಾದ್ ಜೋಷಿ ಮುಖ್ಯಮಂತ್ರಿಯಾಗಬಹುದು ಎಂದು ಜೆಡಿಎಸ್‌ ಪಕ್ಷದ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಈಗ, ಬಿ.ಎಲ್.ಸಂತೋಷ್‌ರವರು ಏಳೆಂಟು ಅಭ್ಯರ್ಥಿಗಳನ್ನು ಬದಲಿಸಿ ಸಿಎಂ ಆಗಲು ಮುಂದಾಗಿದ್ದಾರೆ ಎಂದು ಜಗದೀಶ್‌ ಶೆಟ್ಟರ್‌ ಆರೋಪಿಸಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಪ್ರಹ್ಲಾದ್‌ ಜೋಷಿ ಹಾಗೂ ಬಿ.ಎಲ್.ಸಂತೋಷ್‌ ನಡುವೆ ಪೈಪೋಟಿಯಿರುತ್ತದೆ ಎನ್ನುವುದು ಇದರಿಂದ ಸಾಬೀತಾಗಿದೆ ಎಂದು ಹೇಳಿದರು.
ಬೆಂಗಳೂರಿನ ಅಕ್ಕಪಕ್ಕದ ಐದು ಕ್ಷೇತ್ರಗಳಾದ ಜಯನಗರ, ಬಸವನಗುಡಿ, ಚಿಕ್ಕಪೇಟೆ, ರಾಜಾಜಿನಗರ, ಚಾಮರಾಜಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಿಂದ ಬಿಜೆಪಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಐದು ಕ್ಷೇತ್ರಗಳಲ್ಲಿ ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಗ್ಗೆ ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಆದ್ದರಿಂದ ನಾವು ಈ ವಿಷಯವನ್ನು ಜನರ ಮುಂದಿಡುತ್ತಿದ್ದೇವೆಂದು ತಿಳಿಸಿದರು.

ಆಮ್‌ ಆದ್ಮಿ ಪಕ್ಷ ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸಿಮೀತವಾದ ಪಕ್ಷವಲ್ಲ. ಇಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಚುನಾವಣೆ ಗೆಲ್ಲಲು ಪ್ರಬಲ ಜಾತಿಗಳ ಮೊರೆ ಹೋಗಿದ್ದು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಬ್ರಿಜೇಶ್‌ ಕಾಳಪ್ಪ ಇದೇ ವೇಳೆ ಕಿಡಿಕಾರಿದರು
ಆಪ್ ಆರೋಪ ಸಂಬಂಧ ಬಿಬಿಎಂಪಿ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಸಂಪರ್ಕಿಸಲಾಯಿತು. ಆದರೆ, ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಿದರು. ಈ ನಡುವೆ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ವಾಣಿ ನಿಂಗಪ್ಪ ಕೂಡ ಪ್ರತಿಕ್ರಿಯಿಸಲು ಸಂಪರ್ಕಕ್ಕೆ ಸಿಗಲಿಲ್ಲ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top