ಪೂಂಚ್ ಭಯೋತ್ಪಾದಕ ದಾಳಿ

ವಾಹನಕ್ಕೆ ಬೆಂಕಿ ಹತ್ತಿಕೊಂಡು ಐವರು ಯೋಧರು ಹುತಾತ್ಮ

ಪೂಂಚ್ : ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಘಟನೆ ಬಳಿಕ ಅಡಗಿ ಕುಳಿತಿರುವ ಉಗ್ರರಿಗಾಗಿ ಸೇನಾಪಡೆಗಳು ಶುಕ್ರವಾರ ಭಾರೀ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ದಾಳಿ ನಡೆದ ಸ್ಥಳದ ಸುತ್ತಲೂ ಭದ್ರತಾ ಪಡೆಗಳು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಉಗ್ರರ ಪತ್ತೆಗೆ ಡ್ರೋಣ್’ಗಳು, ಸ್ನಿಫ್ಪರ್ ಡಾಗ್ ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಗಡಿ ಜಿಲ್ಲೆಗಳಾದ ರಜೌರಿ ಹಾಗೂ ಪೂಂಚ್ ನಲ್ಲಿ ಹೈ ಅಲರ್ಟ್ ಘೋಷಮೆ ಮಾಡಲಾಗಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಕಣ್ಗಾವಲನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ಘಟನೆ ಬಳಿಕ ಭಿಂಬರ್ ಗಲಿ-ಪೂಂಚ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಮೆಂಧರ್ ಮೂಲಕ ಪೂಂಚ್‌ಗೆ ಹೋಗಲು ಜನರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ನಡುವೆ ಘಟನಾ ಸ್ಥಳಕ್ಕೆ ಎನ್ಐಎ ತಂಡ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.































 
 

ಗುರುವಾರ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಭಿಂಬರ್ ಗಲಿ ಪ್ರದೇಶದ ಬಳಿ ಸೇನಾ ವಾಹನವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಐವರು ಯೋಧರು ಹುತಾತ್ಮರಾಗಿ, ಓರ್ವ ಯೋಧ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಎನ್‍ಐಎ ತಂಡ ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ದೆಹಲಿಯಿಂದ ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿದೆ.

ದಾಳಿಯಲ್ಲಿ ಮೃತಪಟ್ಟ ಯೋಧರನ್ನು ಹವಿಲ್ದಾರ್ ಮನ್ದೀಪ್ ಸಿಂಗ್, ದೇಬಾಶಿಶ್ ಬಸ್ವಾಲ್, ಕುಲ್ವಂತ್ ಸಿಂಗ್, ಹಕ್ರ್ರಿಶನ್ ಸಿಂಗ್ ಮತ್ತು ಸೇವಕ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತ ಯೋಧರೆಲ್ಲರೂ ಈ ಪ್ರದೇಶದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ ಘಟಕದ ಸಿಬ್ಬಂದಿಯಾಗಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಯೋಧನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೇನಾ ಪ್ರಧಾನ ಕಚೇರಿಯ ಉತ್ತರ ಕಮಾಂಡ್ ಅಧಿಕೃತವಾಗಿ ಮಾತನಾಡಿ, ಅನಾಮಿಕ ಉಗ್ರರು ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ಭಾರೀ ಮಳೆ ಹಾಗೂ ಕಡಿಮೆ ಗೋಚರತೆಯ ಲಾಭವನ್ನು ಉಗ್ರರು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಘಟನೆಗೆ ಉಗ್ರರು ಗ್ರೆನೇಡ್‍ಗಳನ್ನು ಬಳಸಿದ್ದರಿಂದ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.

ಜೈಶ್ ಬೆಂಬಲಿತ ಉಗ್ರರ ಗುಂಪು, ಪೀಪಲ್ಸ್ ಆ್ಯಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‍ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ನಾಲ್ವರು ಉಗ್ರರು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಾತನಾಡಿ, ವೀರಯೋಧ ಪ್ರಾಣಹಾನಿಯಿಂದ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ. “ದೇಶಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಯೋಧರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆಂದು ಹೇಳಿದ್ದಾರೆ.

ಈ ನಡುವೆ ಉಗ್ರರ ದಾಳಿ ಕೃತ್ಯವನ್ನು ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಗುರುವಾರ ಸಂಜೆ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳವು ಜಮ್ಮು ನಗರದ ತಾವಿ ಸೇತುವೆಯ ಮೇಲೆ ಪ್ರತಿಭಟನೆ ನಡೆಸಿತು. ಈ ವೇಳೆ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿತು. ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನ ಘೋಷಿಸಿದ ದಿನವೇ ಉಗ್ರರ ದಾಳಿ ನಡೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top