ಪುತ್ತೂರು: ಬಿಜೆಪಿ ಟಿಕೇಟ್ ಘೋಷಣೆಗೆ ಮೊದಲು ಅರುಣ್ ಕುಮಾರ್ ಪುತ್ತಿಲ ಅವರು ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
“ನಾನು ಸಂಘ ಪರಿವಾರದ ಕಾರ್ಯಕರ್ತ. ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವವರನ್ನು ಗೆಲ್ಲಿಸುವುದು ಜವಾಬ್ದಾರಿ…” ಎಂಬ ಹೇಳಿಕೆ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
“ಇದೇನು ಹೇಳುವುದೊಂದು, ಮಾಡುವುದೊಂದು” ಎಂಬಂತಾಗಿದೆಯಲ್ಲವೇ? ಬಿಜೆಪಿ ಹೈಕಮಾಂಡ್ ಟಿಕೇಟ್ ನೀಡಿರುವ ವ್ಯಕ್ತಿಗೆ ಬೆಂಬಲ ನೀಡದೇ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಸ್ವತಃ ಬಿಜೆಪಿ ಪಕ್ಷದ ಅಭ್ಯರ್ಥಿ ವಿರುದ್ಧವೇ ಯುದ್ಧಕ್ಕೆ ನಿಂತಂತಾಗಿದೆ ಎಂಬ ಪ್ರತಿಕ್ರಿಯೆಗಳು ಬರುತ್ತಿವೆ.
ಇನ್ನೊಂದೆಡೆ, ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆಯಿಂದ ಅಶೋಕ್ ಕುಮಾರ್ ರೈ ಲಾಭ ಪಡೆಯುವುದು ಗ್ಯಾರೆಂಟಿ. ಇದು ಅಶೋಕ್ ಕುಮಾರ್ ರೈ ಅವರಿಗೆ ಲಾಭ ಮಾಡಿಕೊಡುವ ಉದ್ದೇಶ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೋಲುಣಿಸುವ ಮೂಲಕ, ಹಿಂದುತ್ವ ಪರ ಕೆಲಸ ಮಾಡಿರುವ ಮಹಿಳಾ ಜನಪ್ರತಿನಿಧಿ ಆಶಾ ತಿಮ್ಮಪ್ಪ ಅವರ ವಿರುದ್ಧವೇ ಅರುಣ್ ಕುಮಾರ್ ಪುತ್ತಿಲ ಯುದ್ಧ ಸಾರಿದ್ದಾರೆ ಎಂದು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ.
ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆಯಿಲ್ಲ, ಜವಾಬ್ದಾರಿಯೂ ಇಲ್ಲ. ಕಾರ್ಯಕರ್ತನೂ ಅಲ್ಲ ಎಂದು ಪಕ್ಷ ಮುಖಂಡರೇ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಅಂದ ಮೇಲೆ ಬಿಜೆಪಿ ಹೈಕಮಾಂಡ್ ಟಿಕೇಟ್ ನೀಡುವುದರಲ್ಲಿ ಅರ್ಥವಿಲ್ಲ. ಹಾಗಿದ್ದು ಟಿಕೇಟ್ ಬಯಸಿ ಕೊನೆಗೆ ಟಿಕೇಟ್ ನೀಡದೇ ಇದ್ದಾಗ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿರುವುದು ಸರಿಯೇ? ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
“ನಾನು ಚುನಾವಣೆಗೆ ಸ್ಪರ್ಧಿಸಬೇಕೆಂಬುದು ಕಾರ್ಯಕರ್ತರ ಅಭಿಲಾಷೆ, ಹಾಗೆಂದು ಟಿಕೇಟ್ ನೀಡಿಲ್ಲ ಎಂಬ ಕಾರಣಕ್ಕೆ ಪಕ್ಷಾಂತರ ಮಾಡಿ ಸ್ವಪಕ್ಷೀಯರಿಗೆ ಅನ್ಯಾಯ ಮಾಡಲಾರೆ” ಎಂದು ಹೇಳಿಕೆಯನ್ನು ಅರುಣ್ ಪುತ್ತಿಲ ನೀಡಿದ್ದರು. ಪಕ್ಷದಲ್ಲಿ ಯಾವುದೇ ಹುದ್ದೆಯಲ್ಲಿ ಗುರುತಿಸಿಕೊಂಡಿರದ ಅರುಣ್ ಕುಮಾರ್ ಪುತ್ತಿಲರು ಟಿಕೇಟ್ ಬಯಸುವ ಜತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಸರಿಯೇ ? ಈ ಎಲ್ಲಾ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.