ಪುತ್ತೂರು: ಈ ಬಾರಿ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರನ್ನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕರೆ ನೀಡಿದರು.
ಅವರು ಗುರುವಾರ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದರು.
ಪುತ್ತೂರು ವಿಧಾನಸಭಾ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಜಿ.ಪಂ. ಸದಸ್ಯರಾಗಿ, ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಜತೆಗೆ ಜನರು, ಕಾರ್ಯಕರ್ತರ ಮಧ್ಯೆ ಒಂದಾಗಿದ್ದರು. ಈ ನಿಟ್ಟಿನಲ್ಲಿ ಆಶಾ ತಿಮ್ಮಪ್ಪ ಅವರಿಗೆ ಪಕ್ಷ ಇಂದು ಅವಕಾಶ ನೀಡಿದೆ ಎಂದು ಹೇಳಿದ ಅವರು, ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿನ್ನೆ ನಡೆದ ಸಮಾವೇಶದಲ್ಲಿ ವಾಜಪೇಯಿ, ನರೇಂದ್ರ ಮೋದಿಯವರಂತಹವರು ಕಟ್ಟಿ ಬೆಳೆಸಿದ ಪಕ್ಷ, ಭಾರತೀಯ ರಾಷ್ಟ್ರಾಭಿಮಾನದ ಪಕ್ಷ, ಸಂಘಟನೆಗೆ ಬಿಜೆಪಿಯವರಿಗೆ ಬುದ್ಧಿ ಕಲಿಸುತ್ತೇವೆ ಎಂದು ಸವಾಲು ಎಸೆದಿದ್ದು, ಈ ಸವಾಲಿಗೆ ಮೇ 10ರ ಮತದಾನದಂದು ಉತ್ತರ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಮಹಿಳೆಯರಿಗೆ ಪ್ರಾಧಾನ್ಯತೆ ನೀಡುವ ಪಕ್ಷ: ಶ್ರುತಿ
ಚಿತ್ರನಟಿ ಶ್ರುತಿ ಮಾತನಾಡಿ, ದೇಶದ ರಕ್ಷಣೆ ಮಹಿಳೆಯರಿಂದಲೂ ಸಾಧ್ಯ ಎಂದು ರಕ್ಷಣಾ ಸಚಿವರಾಗಿ ಮಹಿಳೆಯನ್ನು ಆಯ್ಕೆ ಮಾಡಿ, ರಾಷ್ಟ್ರಪತಿ ಹುದ್ದೆಯನ್ನೂ ಮಹಿಳೆಗೆ ನೀಡುವ ಮೂಲಕ ಬಿಜೆಪಿ ರಾಷ್ಟ್ರಾಭಿಮಾನದ, ಸಮಾಜದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡುವ ಏಕೈಕ ಪಕ್ಷವಾಗಿದೆ. ತಾಯಿಗಾಗಿ ತನ್ನನ್ನು ಸಮರ್ಪಿಸಿದಂತಹ ಹಲವಾರು ನಾಯಕರು ಬಿಜೆಪಿ ಪಕ್ಷದಲ್ಲಿದ್ದು, ತಾಯಿಯಂತೆ ಮಹಿಳೆಯರನ್ನು ಪೂಜಿಸುವ ಪಕ್ಷವೊಂದಿದ್ದರೆ ಅದು ಬಿಜೆಪಿ ಪಕ್ಷ, ಎಂದ ಅವರು, ಕಳೆದ 40 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರೀಯರಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರನ್ನು ಈ ಬಾರಿ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಹೆಚ್ಚಿನ ಅಂತರದಿಂದ ಗೆಲುವು: ಮಠಂದೂರು
ಶಾಸಕ ಸಂಜೀವ ಮಠಂದೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಅವಧಿಯಲ್ಲಿ ನನ್ನನ್ನು ಹೇಗೆ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರೋ ಹಾಗೆಯೇ ಈ ಬಾರಿ ಆಶಾ ತಿಮ್ಮಪ್ಪ ಅವರನ್ನು ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕಾಗಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಸುಳ್ಯ ವಿಧಾನಸಭಾ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಹಿರಿಯ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಧಾಕೃಷ್ಣ ಬೂಡಿಯಾರ್, ಒಬಿಸಿ ಮೋರ್ಚಾದ ಆರ್.ಸಿ.ನಾರಾಯಣ, ಪುತ್ತೂರು ಚುನಾವಣಾ ಉಸ್ತುವಾರಿ ರಾಜೇಶ್ ಕಾವೇರಿ ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.