ಪುತ್ತೂರು: ಪುತ್ತೂರು ಬಿಜೆಪಿಗೆ ಈ ಬಾರಿ ಹಿಂದಿನ ಅವಧಿಯ ಅಭಿವೃದ್ಧಿ ಕಾರ್ಯಗಳೇ ಶ್ರೀ ರಕ್ಷೆಯಾಗಲಿದೆಯೇ ? ಹೀಗೊಂದು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಹಿಂದಿನ ಅವಧಿಯ ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ತಂದ ಅನುದಾನ, ವಿಧಾನಸಭಾ ಕ್ಷೇತ್ರಾದ್ಯಂತ ಮಾಡಿದ ಅಭಿವೃದ್ಧಿ ಕಾರ್ಯಗಳು ಈ ಬಾರಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಕೈಹಿಡಿಯಲಿರುವುದು ಗ್ಯಾರಂಟಿ.

ಹಿಂದಿನ ಅವಧಿಯಲ್ಲಿ ಸಂಜೀವ ಮಠಂದೂರು ಅವರು ರಸ್ತೆಗಳ ಅಭಿವೃದ್ಧಿ, ನೂತನ ರಸ್ತೆಗಳು, ಕಿಂಡಿ ಅಣೆಕಟ್ಟುಗಳು, ವಿವಿಧ ಇಲಾಖೆಗಳ ವಿಸ್ತೃತ ಕಟ್ಟಡ, ನೂತನ ಕಟ್ಟಡಗಳಿಗೆ ಶಿಲಾನ್ಯಾಸ, ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದರು. ಈ ನಡುವೆ ಕ್ಷೇತ್ರದಿಂದ ಟಿಕೇಟ್ ಪಡೆಯುವಲ್ಲಿ ವಂಚಿತವಾದರೂ, ಪಕ್ಷದ ಹೈಕಮಾಂಡ್ ನ ಬದ್ಧತೆಗೆ ತಲೆಬಾಗಿ ತನ್ನ ಪ್ರಾಮಾಣಿಕತೆಯನ್ನು ಮೆರೆಯುವ ಮೂಲಕ ಜನಮಾನಸದಲ್ಲಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅಭ್ಯರ್ಥಿ ಆಶಾ ತಿಮ್ಮಪ್ಪರ ಗೆಲುವಿಗಾಗಿ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದು, ಅವರೊಂದಿಗೆ ಪ್ರಚಾರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಬಿಜೆಪಿಯ ಗೆಲುವಿನ ಪತಾಕೆ ಹಾರಿಸುವಲ್ಲೂ ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ.
ಆಶಾ ತಿಮ್ಮಪ್ಪ ಅವರು ಈಗಾಗಲೇ ವಿವಿಧ ಧಾರ್ಮಿಕ ಕೇಂದ್ರಗಳು, ಮಠಾಧೀಶರು, ದೇವಸ್ಥಾನಗಳನ್ನು ಭೇಟಿ ಮಾಡಿ ಅಲ್ಲಿಯ ಸ್ವಾಮೀಜಿಗಳು, ಮಠಾಧೀಶರಿಂದ ಆಶೀರ್ವಚನ ಪಡೆದಿದ್ದಾರೆ. ತನ್ನ ಕಾರ್ಯಕ್ಷೇತ್ರದಲ್ಲಿ ದಣಿವರಿಯದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು,, ಕಾರ್ಯಕರ್ತರು ಫೀಲ್ಡಿಗಿಳಿದು ಹುರುಪಿನಿಂದ ಆಶಾ ತಿಮ್ಮಪ್ಪ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಗ್ರಾಮೀಣ ಮಟ್ಟದಲ್ಲಿ ಭರಪೂರ ಬೆಂಬಲ ದೊರೆತಿದೆ.
ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದಂದಿನಿಂದಲೇ ಆಶಾ ತಿಮ್ಮಪ್ಪ ಅವರು ಬಿಜೆಪಿಯ ಹಿರಿಯ ಮುಖಂಡರು, ಸಂಘ ಪರಿವಾರದ ಮುಖಂಡರುಗಳು ಸಹಿತ ಕ್ಷೇತ್ರಾದ್ಯಂತ ಕಾರ್ಯಕರ್ತರನ್ನು ಭೇಟಿ ಮಾಡುವ ಮೂಲಕ ಸಾಕಷ್ಟು ಚರ್ಚೆಗಳನ್ನು ಈಗಾಗಲೇ ಮಾಡಿದ್ದಾರೆ. ಮುಖ್ಯವಾಗಿ ಶಾಸಕ ಸಂಜೀವ ಮಠಂದೂರು ಅವರೇ ಸ್ವತಃ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಜತೆ ಫೀಲ್ಡಿಗಿಳಿದು ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಆಶಾ ತಿಮ್ಮಪ್ಪರಿಗೆ ಬಲ ಬರುವುದರ ಜತೆಗೆ ಶ್ರೀ ರಕ್ಷೆಯಾಗಲಿದೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ.
ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರು ಹಾಗೂ ಮತದಾರರನ್ನು ಭೇಟಿ ಮಾಡುವ ಮೂಲಕ ಸದ್ದಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಶಾಸಕ ಸಂಜೀವ ಮಠಂದೂರು ಅವರ ಊರಾದ ಹಿರೇಬಂಡಾಡಿಗೆ ಸಂಜೀವ ಮಠಂದೂರು ಜತೆ ಇತ್ತೀಚೆಗೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರೊಂದಿಗೆ ಚರ್ಚಿಸಿದ್ದಾರೆ.