ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಪರ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಪ್ರಚಾರದ ಭರದಲ್ಲಿ ತಮ್ಮ ಆರಾಧಕ ನರೇಂದ್ರ ಮೋದಿಯನ್ನೇ ನಿರ್ಲಕ್ಷಿಸಿದರೇ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಇದೀಗ ಕೇಳಿಬರುತ್ತಿದೆ.
“ಈ ಬಾರಿ ಮೋದಿ ಬಂದು ಮತ ಕೇಳಿದರೂ, ನನ್ನ ಮನೆಯವರ ಮತ ಅರುಣ್ಣನಿಗೇ” ಹೀಗೆಂಬ ಒಕ್ಕಣೆಯ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನರೇಂದ್ರ ಮೋದಿ ದೇಶದ ಪಥವನ್ನೇ ಬದಲಿಸಿ, ಭಾರತವನ್ನು ವಿಶ್ವಗುರುವಾಗುವತ್ತ ಕೊಂಡೊಯ್ಯುವಲ್ಲಿ ಯಶ ಕಂಡವರು. ತನ್ನ ದೇಶಕ್ಕೆ ಬಾರದಂತೆ ತಡೆ ಹಾಕಿದ್ದ ಅಮೆರಿಕ, ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ಸ್ವತಃ ಆಹ್ವಾನಿಸಿ, ಕೆಂಪು ಹಾಸಿನ ಚಾದರ ಹಾಸಿತ್ತು. ಹೀಗೆ ಭಾರತದ ಸ್ಥಾನಮಾನವನ್ನು ವಿಶ್ವ ಮಟ್ಟದಲ್ಲಿ ಎತ್ತರಕ್ಕೇರಿಸಿದವರು. ನರೇಂದ್ರ ಮೋದಿ ಕೈಗೊಳ್ಳುವ ಒಂದೊಂದು ನಿರ್ಧಾರದ ಹಿಂದೆಯೂ ಮಹತ್ತರವಾದಂತಹ ಉದ್ದೇಶ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದಕ್ಕೆ ಪೂರಕವೆಂಬಂತೆ, ಈ ಬಾರಿ ಕೇಂದ್ರದಲ್ಲಿಯೇ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗಿತ್ತು.
ಹೀಗಿರುವಾಗ ನರೇಂದ್ರ ಮೋದಿಯನ್ನೇ ಅವಹೇಳನ ಮಾಡುವುದಾಗಲಿ, ಅವರನ್ನೇ ನಿರ್ಲಕ್ಷ್ಯ ಮಾಡುವ ಕೆಲಸ ಆಗಬಾರದು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಪ್ರಚಾರದ ಭರದಲ್ಲಿ ಪುತ್ತಿಲ ಪರ ಅಭಿಮಾನಿಗಳು ಸ್ವಲ್ಪ ಅತಿರೇಕಕ್ಕೆ ಹೋದಂತೆ ಭಾಸವಾಗುತ್ತಿದೆ. ಇದುವರೆಗೆ ಮೋದಿ ಜಪ ಜಪಿಸುತ್ತಿದ್ದವರು, ಇದೀಗ ಒಮ್ಮಿಂದೊಮ್ಮೆಗೇ ಮೋದಿಯನ್ನು ಎದುರು ಹಾಕಿಕೊಳ್ಳಲು ಸಿದ್ಧ ಎಂಬಂತಹ ಘೋಷಣೆಗಳನ್ನು ಕೂಗತೊಡಗಿರುವುದು ಮತದಾರರ ಗೊಂದಲಕ್ಕೆ ಕಾರಣವಾಗಿದೆ.