ಹುಬ್ಬಳ್ಳಿ: ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ಕೈತಪ್ಪಲು ಬಿ. ಎಲ್. ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ .
ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಕಾರಣ ಅಲ್ಲ. ಟಿಕೆಟ್ ತಪ್ಪೋಕೆ ಕಾರಣ ಆದವರ ಹೆಸರು ಹೇಳೋ ಸಮಯ ಇವತ್ತು ಬಂದಿದೆ. ನಾನು ಈ ಹಿಂದೆ ಸಮಯ ಬಂದಾಗ ಹೇಳುತ್ತೇನೆ ಅಂದಿದ್ದೆ, ಇಂದು ಅವರ ಹೆಸರನ್ನು ಬಹಿರಂಗಪಡಿಸುತ್ತಿದ್ದೇನೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಂದಾಗಿ ನನಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈತಪ್ಪಿ ಹೋಯಿತು, ಇವರ ಜೊತೆ ಹಲವು ಜನರು ಇರಬಹುದು ಎಂದು ಆರೋಪ ಮಾಡಿದ್ದಾರೆ.
ನಿನ್ನೆ ಸೋಮವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಇಂದು ಹುಬ್ಬಳ್ಳಿಯಲ್ಲಿ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು ಬಿ. ಎಲ್. ಸಂತೋಷ್ ಮತ್ತು ರಾಜ್ಯ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ಮಾಡಿದರು. ಅವರ ಟೀಂ ಕೂಡ ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದರು. ಅವರಿಂದಲೇ ನನಗೆ ಟಿಕೆಟ್ ತಪ್ಪಿತ್ತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಟಿಕೆಟ್ ಘೋಷಣೆ ಆಗುವವರೆಗೆ ಸುಮ್ಮನಿದ್ದೆ ಎಂದಿದ್ದಾರೆ.