ಆಶಾ ತಿಮ್ಮಪ್ಪ ಆಶಾದಾಯಕ ಮಾತು | ಅಭಿವೃದ್ಧಿ ಕೆಲಸ, ಹಿಂದುತ್ವಕ್ಕಾಗಿ ಕೆಲಸ ಮಾಡಿದ ಅನುಭವ | ಜನಸಂಘದ ಕಾಲದಿಂದಲೂ ಜನರ ಒಡನಾಡಿ

ಪುತ್ತೂರು ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕೀಯ ತಿರುಗಿ ನೋಡುವಂತೆ ಮಾಡಿದೆ. ರಾಷ್ಟ್ರ ನಾಯಕರು ಪುತ್ತೂರಿಗೆ ಬರುವ ಸೂಚನೆಗಳು ಇವೆ. ಈ ಎಲ್ಲಾದರ ನಡುವೆ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಕೆಲಸ, ಆಲೋಚನೆ, ಭವಿಷ್ಯದ ಯೋಜನೆಗಳು ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ನ್ಯೂಸ್ ಪುತ್ತೂರು ಅವರೊಂದಿಗೆ ಮಾತುಕತೆ ನಡೆಸಿದ್ದು, ಅದರ ವಿವರ ಇಲ್ಲಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರೀಕ್ಷಿತವೇ?

ಆಶ್ಚರ್ಯ. ನಿರೀಕ್ಷೆಯೇ ಮಾಡಿರಲಿಲ್ಲ ಹಾಗೂ ಇರಲಿಲ್ಲ. ಬೆಳ್ತಂಗಡಿಯಲ್ಲಿ ಚುನಾವಣಾ ಪ್ರಭಾರಿಯ ಜವಾಬ್ದಾರಿ ನೀಡಿದ್ದರು. ಆದ್ದರಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಿದ್ಧತೆ ನಡೆಸುತ್ತಿದ್ದೆ. ಅಷ್ಟರಲ್ಲಿ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದರು.































 
 

ಚುನಾವಣೆ ಎದುರಿಸುವುದು ನನಗೆ ಹೊಸದೇನೂ ಅಲ್ಲ. ಇದುವರೆಗೆ 4 ಬಾರಿ ಚುನಾವಣೆ ಎದುರಿಸಿದ್ದೇನೆ. ಸಾಕಷ್ಟು ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಇದು 5ನೇ ಬಾರಿ ಚುನಾವಣೆ ಎದುರಿಸುತ್ತಿದ್ದೇನೆ. ಇಲ್ಲಿ ಶಾಸಕ ಸ್ಥಾನದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದೆ.

ನನ್ನ ಪ್ರಕಾರ, ಸಂಜೀವ ಮಠಂದೂರು ಅವರಿಗೆ ಅವಕಾಶ ನೀಡಬೇಕಿತ್ತು. ಒಂದು ಬಾರಿ ಮಾತ್ರ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರು ಒಂದು ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದು, ಆ ಎಲ್ಲಾ ಕೆಲಸಗಳ ಜಾರಿಗೆ ಇನ್ನೊಮ್ಮೆ ಅವಕಾಶ ನೀಡಬೇಕಿತ್ತು.

ಆಡಳಿತ ನಡೆಸುವುದು ನಿಮಗೇನೂ ಹೊಸತಲ್ಲ. ಆದರೆ ಶಾಸಕ ಬಹಳ ಜವಾಬ್ದಾರಿ ಹುದ್ದೆ. ಶಾಸಕರಾಗಿ ಆಯ್ಕೆಯಾದರೆ ನಿಮ್ಮ ಅನುಭವವನ್ನು ಹೇಗೆ ಧಾರೆ ಎರೆಯುವಿರಿ?

ಸುಳ್ಯ ಮಂಡಲ ಪಂಚಾಯತ್ ಆಗಿದ್ದಾಗ ನಾನು ಸದಸ್ಯೆಯಾಗಿದ್ದೆ. ಇದೇ ಸಂದರ್ಭ ಮಂಡಲ ಪಂಚಾಯತ್, ನಗರ ಪಂಚಾಯತ್ ಆಗಿ ಮೇಲ್ದರ್ಜೆಗೇರಿತು. ಆಗ ನಾನು ಅಧ್ಯಕ್ಷೆಯಾಗಿ ಆಯ್ಕೆಯಾದೆ. 2005ರಲ್ಲಿ ನೆಲ್ಯಾಡಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತಿಗೆ ನೆಲ್ಯಾಡಿ ಕ್ಷೇತ್ರದಿಂದ ಗುರುತಿಸಿದರು. ಜಿಲ್ಲಾ ಪಂಚಾಯತಿನ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ ಜಿಲ್ಲಾ ಪಂಚಾಯತಿನ ಅಧ್ಯಕ್ಷೆಯಾಗಿಯೂ ಕೆಲಸ ನಿರ್ವಹಿಸಿದ್ದೇನೆ. ಶಾಸಕನಾಗಿ ಆಯ್ಕೆಯಾದರೆ, ಈ ಎಲ್ಲಾ ಅನುಭವಗಳನ್ನು ಧಾರೆ ಎರೆದು ಕೆಲಸ ಮಾಡುತ್ತೇನೆ.

ನಿಮ್ಮ ಮಗನನ್ನು ದೇಶ ಸೇವೆಗಾಗಿ ಕಳುಹಿಸಿಕೊಟ್ಟಿದ್ದೀರಿ. ನಿಮ್ಮ ಕುಟುಂಬದ ಬಗ್ಗೆ ಸ್ವಲ್ಪ ತಿಳಿಸಿ.

ನಮ್ಮದು ಕೂಡುಕಟ್ಟಿನ ಕುಟುಂಬ. ನನ್ನ ತಾಯಿ ದೇಜಮ್ಮ. ಅವರು ಸುಳ್ಯ ಮಂಡಲ ಪಂಚಾಯತ್ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ. ಆಗ ನಾವು ಅವರೊಂದಿಗೆ ಕೆಲಸ ನಿರ್ವಹಿಸುತ್ತಿದ್ದೇವು. ನನ್ನ ಅಣ್ಣ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಆಗಲೇ ನನಗೆ ರಾಜಕೀಯದಲ್ಲಿ ಆಸಕ್ತಿ ಹುಟ್ಟಿದ್ದು.

ನನ್ನನ್ನು ಮದುವೆಯಾಗಿ ಕೊಟ್ಟದ್ದು ಪುತ್ತೂರು ತಾಲೂಕಿನ ಕುಂತೂರು ಗ್ರಾಮಕ್ಕೆ. ಪತಿ ಸಣ್ಣ ಉದ್ಯಮ ನಡೆಸುತ್ತಿದ್ದರು. ಮಗ ಆರ್.ಎಸ್.ಎಸ್.ನ ಪೂರ್ಣಾವಧಿ ಪ್ರಚಾರಕನಾಗಿ ಕೆಲಸ ಮಾಡುತ್ತಿದ್ದಾನೆ. ಮಗಳು ಕೆಎಂಎಫ್ ಉದ್ಯೋಗಿ.

ಶಾಸಕರಾದರೆ ಅಭಿವೃದ್ಧಿ ಬಗ್ಗೆ, ಹಿಂದುತ್ವದ ಬಗ್ಗೆ ಕಾರ್ಯದ ಬಗ್ಗೆ ಏನು ನಿರೀಕ್ಷೆ ಇಟ್ಟುಕೊಳ್ಳಬಹುದು?

ಹಿಂದುತ್ವದ ಆಧಾರದಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ. ಹಿಂದುತ್ವದ ಒಂದು ಅಂಗ ಬಿಜೆಪಿ ಎಂದು ಹೇಳಬಹುದು. ಬಜರಂಗದಳ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷದ್ ಸಂಘಪರಿವಾರದ ಸಂಘಟನೆಗಳು. ಇವೆಲ್ಲಾ ಕೆಲಸ ಮಾಡುವುದೇ ಹಿಂದುತ್ವಕ್ಕಾಗಿ. ಜನಸಂಘದ ಕಾಲದಿಂದಲೂ ನಾನು ಹಿಂದೂಪರ ಕೆಲಸಗಳಲ್ಲಿ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಎಲ್ಲಾ ಸಂಘಟನೆಗಳನ್ನು, ಮುಖಂಡರನ್ನು, ಕಾರ್ಯಕರ್ತರನ್ನು ಜೊತೆಯಾಗಿಸಿಕೊಂಡು, ಕೆಲಸ ಮಾಡುವ ವಿಶ್ವಾಸ ನನಗಿದೆ.

ಪುತ್ತೂರು ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾಕಷ್ಟು ಬೇಡಿಕೆ ಇದೆ. ಪುತ್ತೂರು ಜಿಲ್ಲಾ ಕೇಂದ್ರವಾಗಬೇಕು ಎನ್ನುವುದು ಪ್ರಮುಖ ಬೇಡಿಕೆ. ಜಿಲ್ಲಾಕೇಂದ್ರ ಆಗಬೇಕು ಎಂದರೆ ಅದಕ್ಕೆ ಪೂರಕ ಕೆಲಸಗಳು ಆಗಬೇಕು. ಇವನ್ನೆಲ್ಲಾ ಹಂತಹಂತವಾಗಿ ಮಾಡಿಕೊಂಡು ಹೋದರೆ ಮಾತ್ರ, ಪುತ್ತೂರಿನ ಸಮಗ್ರ ಅಭಿವೃದ್ಧಿ ಆಗುತ್ತದೆ ಎನ್ನುವ ನಂಬಿಕೆ ನನ್ನದು.

ಸಂಜೀವ ಮಠಂದೂರು ಅವರೊಂದಿಗೂ ನೀವು ಕೆಲಸ ಮಾಡಿದವರು.

ಹೌದು. ನಾನು ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದಾಗ, ಪ್ರಧಾನ ಕಾರ್ಯದರ್ಶಿಯಾಗಿದ್ದಾಗ, ಮಹಿಳಾ ಮೋರ್ಚಾ ಕಾರ್ಯಕಾರಿಣಿ ಅಧ್ಯಕ್ಷೆಯಾಗಿದ್ದಾಗ ಸಂಜೀವ ಮಠಂದೂರು ಅವರೊಂದಿಗೆ ಕೆಲಸ ಮಾಡಿದ್ದೇನೆ. ಸಂಜೀವ ಮಠಂದೂರು ಅವರು ಶಾಸಕರಾಗಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು. ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಆಗಬೇಕಿತ್ತು. ಅವರೊಂದಿಗೆ ಹಲವು ವರ್ಷಗಳ ಒಡನಾಟ ಇದೆ. ಅವರ ಕೆಲಸಗಳ ಮೇಲೆ, ವೈಯಕ್ತಿಕವಾಗಿ ಅವರ ಮೇಲೆ ವಿಶ್ವಾಸ, ಗೌರವ ಇದೆ. ಪುತ್ತೂರಿನಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಅವರ ಅಭಿವೃದ್ಧಿ ಮಂತ್ರಗಳೇ ಪರಿಣಾಮ ಬೀರಲಿದೆ.

ಈ ಬಾರಿ ಟಿಕೇಟ್ ಹಂಚಿಕೆಯಲ್ಲಿ ಜಾತಿ ರಾಜಕೀಯ ಆಗಿದೆ ಎನ್ನುವ ಅಪವಾದ ಇದೆಯಲ್ಲವೇ?

ಖಂಡಿತಾ ಇಲ್ಲ. ನನ್ನ ಮಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕೆಲಸ ಮಾಡುತ್ತಿದ್ದಾನೆ. ಸಂಘಕ್ಕೆ ಯಾವುದೇ ಜಾತಿ ಇಲ್ಲ. ನಾನು ಜನಸಂಘದ ಕಾಲದಿಂದ ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದೇನೆ. ಈ ಎಲ್ಲಾ ಕಾರ್ಯಗಳನ್ನು ಗಮನಿಸಿ, ನನ್ನ ಮೇಲೆ ನಂಬಿಕೆ ಇಟ್ಟು ಪಕ್ಷ ನನಗೆ ಅವಕಾಶ ನೀಡಿದೆ. ನಾನು ಜಾತಿ, ಮತ, ಬೇಧವಿಲ್ಲದೆ ಇದುವರೆಗೆ ಕೆಲಸ ನಿರ್ವಹಿಸಿದ್ದೇನೆ.

ಮತದಾರರಿಗೆ ನಿಮ್ಮ ಸಂದೇಶ?

ಮತದಾರರು ಗೊಂದಲಕ್ಕೆ ಒಳಗಾಗುವ ಅವಶ್ಯಕತೆಯೇ ಇಲ್ಲ. ಮುಂದಿನ ಪೀಳಿಗೆಗೆ ಸ್ಪಷ್ಟ ಸಂದೇಶ ನೀಡುವ ನಿಟ್ಟಿನಲ್ಲಿ ಪ್ರತಿಯೋರ್ವರು ಮತದಾನ ಮಾಡಬೇಕು. ಹಿಂದೂಗಳ ರಕ್ಷಣೆಗೆ, ಹಿಂದೂಪರ ಕೆಲಸಗಳಿಗಾಗಿ ಬಿಜೆಪಿಗೆ ಮತ ಹಾಕಬೇಕು. ಜೀವನ ಪದ್ಧತಿ, ದೇಶ ರಕ್ಷಣೆಗೋಸ್ಕರ ತಮ್ಮ ಮತವನ್ನು ಬಿಜೆಪಿಗೆ ಹಾಕಿ ಗೆಲ್ಲಿಸಿಕೊಡಬೇಕು. ಯಾರಿಗೂ ನೋವಾಗದಂತೆ, ಹಿಂದೂಗಳ ರಕ್ಷಣೆಯ ನಿಟ್ಟಿನಲ್ಲಿ ಕೆಲಸ ಮಾಡುವ ಜವಾಬ್ದಾರಿ ನಮ್ಮದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top