ಪುತ್ತೂರು: ಖಾಸಾ ದೋಸ್ತುಗಳಾದ ಅಶೋಕ್ ಕುಮಾರ್ ರೈ ಹಾಗೂ ಅರುಣ್ ಕುಮಾರ್ ಪುತ್ತಿಲ ಆಖಾಡದಲ್ಲಿ ಎದುರು ಬದುರಾಗುತ್ತಾರೆಯೇ? ಅಥವಾ ಅರುಣ್ ಕುಮಾರ್ ಪುತ್ತಿಲ ಹೋರಾಟ, ದೋಸ್ತ್ ಅಶೋಕ್ ಕುಮಾರ್ ರೈ ಅವರಿಗೆ ಜೀವ ತುಂಬಲಿದೆಯೇ?
ಹೌದು! ಇದು ಮತದಾರರ ತಲೆಯಲ್ಲಿ ಸುಳಿಯುತ್ತಿರುವ ಯಕ್ಷಪ್ರಶ್ನೆ. ಉತ್ತರ ಸಿಗಬೇಕೆಂದರೆ ಫಲಿತಾಂಶದವರೆಗೂ ಕಾಯಬೇಕಷ್ಟೇ. ಆದರೆ, ಅಲ್ಲಿವರೆಗೂ ಸಾಕಷ್ಟು ಲೆಕ್ಕಾಚಾರಗಳು ಓಡಾಡುತ್ತಿರುತ್ತವೆ. ಸದ್ಯ ಓಡಾಡುತ್ತಿರುವ ಕೆಲ ಲೆಕ್ಕಾಚಾರಗಳ ವರದಿ ಇಲ್ಲಿವೆ ನೋಡಿ.
ಅರುಣ್ ಕುಮಾರ್ ಹಾಗೂ ಅಶೋಕ್ ಕುಮಾರ್ ಕಾಲೇಜು ದಿನಗಳಿಂದಲೇ ಗೆಳೆಯರು. ಮಾತ್ರವಲ್ಲ ಬೆಂಚ್ ಮೇಟ್ಸ್. ಕಾಲೇಜು ಬಳಿಕ ಇಬ್ಬರ ಹಾದಿಯೂ ಭಿನ್ನವಾಯಿತು. ಇದೀಗ ಮತ್ತೆ ಚುನಾವಣಾ ಆಖಾಡದಲ್ಲಿ ಒಂದಾಗಿದ್ದಾರೆ. ಒಂದು ವೇಳೆ ಅರುಣ್ ಕುಮಾರ್ ಪುತ್ತಿಲ ಗೆದ್ದದ್ದೇ ಆದರೆ ಅಶೋಕ್ ಕುಮಾರ್ ರೈ ಎದುರಾಳಿ ಅಥವಾ ವಿಪಕ್ಷ ನಾಯಕ. ಸೋತದ್ದೇ ಆದರೆ, ಮತ್ತೆ ಫ್ರೆಂಡ್ ಶಿಪ್ ಮುಂದುವರಿಯಬಹುದೇ? ಕಾರಣ, ಅರುಣ್ ಕುಮಾರ್ ಪುತ್ತಿಲ ಸೆಳೆದುಕೊಳ್ಳುವ ಮತಗಳು, ಅಶೋಕ್ ಕುಮಾರ್ ರೈ ಅವರಿಗೆ ವರದಾನವಾಗಲಿದೆ. ಇನ್ನು ನೇರವಾಗಿ ಹೇಳುವುದಾದರೆ, ಗೆಲುವಿಗೂ ಕಾರಣವಾಗಬಹುದು.
ಹಿಂದಿನ ಬಾರಿ ಬಿಜೆಪಿಯೊಳಗಡೇ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆಗ, ಒಂದು ವೇಳೆ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೇಟ್ ಸಿಕ್ಕರೆ, ತಾನು ಟಿಕೇಟ್ ಪಡೆದುಕೊಳ್ಳುವ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಅಶೋಕ್ ಕುಮಾರ್ ರೈ ಘೋಷಿಸಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಅಶೋಕ್ ಕುಮಾರ್ ರೈ ಕಾಂಗ್ರೆಸಿನಿಂದ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಟಿಕೇಟ್ ಸಿಗದೇ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧೆಗೆ ಧುಮುಕ್ಕಿದ್ದಾರೆ.
ಅಶೋಕ್ ಕುಮಾರ್ ರೈ ಅವರಿಗೆ ಗೆಲುವು ಅನಿವಾರ್ಯ. ಅರುಣ್ ಕುಮಾರ್ ಪುತ್ತಿಲ ಅವರಿಗೆ ಗೆಲುವು ಅನಿವಾರ್ಯವಾದರೂ, ಹೈಕಮಾಂಡಿಗೆ ಸ್ಪಷ್ಟ ಸಂದೇಶ ರವಾನಿಸುವುದು ಗೆಲುವಿಗಿಂತಲೂ ದೊಡ್ಡ ವಿಚಾರ. ಹಾಗಾಗಿ, ಅತಿಹೆಚ್ಚು ಮತಗಳನ್ನು ಬಾಚಿಕೊಳ್ಳುವತ್ತ ಗಮನ ನೆಟ್ಟಿದ್ದಾರೆ. ಇದು ಬಿಜೆಪಿಗೆ ನಷ್ಟ. ಆದರೆ ಕಾಂಗ್ರೆಸಿಗೆ ಲಾಭ.