ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್

ಜಗತ್ತಿಗೆ ನಗುವುದನ್ನು ಕಲಿಸಿದವನ ಬದುಕು ದುರಂತ ಆಗಿತ್ತು

ಜಗತ್ತಿನ ಮಹೋನ್ನತ ಕಾಮಿಡಿ ಸ್ಟಾರ್, ನಿರ್ಮಾಪಕ, ಎಡಿಟರ್, ನಿರ್ದೇಶಕ, ಲೇಖಕ, ಸಂಗೀತ ನಿರ್ದೇಶಕ…ಇನ್ನೂ ಏನೇನೋ ಅವತಾರಗಳು! ಚಾರ್ಲಿ ಚಾಪ್ಲಿನ್ ಬದುಕಿದ ರೀತಿಯೇ ಹಾಗೆ.
A day without LAUGHTER is a day WASTED ಎಂದವ ಚಾಪ್ಲಿನ್

ಆತನ TRAMP ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರ































 
 

ಆ ವಿಚಿತ್ರವಾದ ಬುಟ್ಟಿಯಾಕಾರದ ಟೋಪಿ, ಬೂಟ್ ಪಾಲಿಶ್ ಮೀಸೆ, ಉದ್ದವಾದ ನಡೆ ಕೋಲು ಈ ಮೂರು ಸೇರಿದರೆ ಚಾಪ್ಲಿನ್ ಚಿತ್ರ ಕಣ್ಮುಂದೆ ಬಂದಾಯಿತು. ಆ ಪಾತ್ರದ ಹೆಸರು TRAMP. ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರವದು. 1889ರ ಏಪ್ರಿಲ್ 16ರಂದು ಲಂಡನ್ನಿನಲ್ಲಿ ಹುಟ್ಟಿದ ಅವನ ಬಾಲ್ಯವು ದೊಡ್ಡ ಸಮಸ್ಯೆಗಳಿಂದ ಕೂಡಿತ್ತು. ಹುಟ್ಟಿಸಿದ ತಂದೆ ಬಿಟ್ಟು ಹೋಗಿದ್ದರು. ತಾಯಿಗೆ ಗುಣವಾಗದ ಮನೋವ್ಯಾಧಿ. ಮಗ ಒಂಬತ್ತನೆಯ ವಯಸ್ಸಿಗೆ ತಲುಪುವಾಗ ಅಮ್ಮ ಹೆಚ್ಚು ಕಡಿಮೆ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರು. ಆಕೆ ಹಲವು ಮನೆಗಳಲ್ಲಿ ಕೆಲಸ ಮಾಡಿದ್ದು, ನಾಟಕ ಮಂಡಳಿಗಳಲ್ಲಿ ಕಾಮಿಡಿ ಪಾತ್ರ ಮಾಡಿ ನಗಿಸಿದ್ದು ಎಲ್ಲವೂ ಹೊಟ್ಟೆಪಾಡಿಗಾಗಿ. ಅಮ್ಮನ ಮೇಲೆ ಮಗನಿಗೆ ಅತಿಯಾದ ಪ್ರೀತಿ. ಬದುಕು ಜಟಕಾ ಬಂಡಿ ಅವನನ್ನು ಅತಿ ಕಿರಿಯ ಪ್ರಾಯದಲ್ಲಿ ಅಮೆರಿಕಕ್ಕೆ ಕರೆದುಕೊಂಡು ಹೋಯಿತು. TRAMP ಪಾತ್ರದ ಕಲ್ಪನೆ ಮೂಡಿದ್ದು, ಸಿನೆಮಾದ ಭಾಷೆಯನ್ನು ಆತ ಕಲಿತದ್ದು ಅಮೆರಿಕದಲ್ಲಿ.

ಆತನ ಚಿತ್ರ ವಿಚಿತ್ರ ಮ್ಯಾನರಿಸಂ ಜಗತ್ತಿಗೆ ಹುಚ್ಚು ಹಿಡಿಸಿದವು

1921ರಲ್ಲಿ ಅವನ ಮೊದಲ ಸಿನೆಮಾ The Kid ತೆರೆಗೆ ಬಂದಿತು. ಅವನ ವಿಚಿತ್ರವಾದ ನಡಿಗೆ, ದೇಹ ಭಾಷೆ, ವಿಚಿತ್ರ ಮ್ಯಾನರಿಸಂಗಳು ಮತ್ತು ವ್ಯಂಗ್ಯವಾದ ನಗು ಜಗತ್ತಿನ ಸಿನಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟವು. ಆಗ ಟಾಕಿ ಸಿನೆಮಾಗಳು ಆರಂಭ ಆಗಿದ್ದರೂ ಚಾರ್ಲಿ ಚಾಪ್ಲಿನ್ ಆರಂಭದಲ್ಲಿ ಮಾಡಿದ್ದೆಲ್ಲ ಮೂಕಿ ಸಿನಿಮಾಗಳೇ. SILENCE is the best mode of expressions ಎಂದು ಚಾರ್ಲಿ ನಂಬಿದ್ದ. ಅವನ ಸಿನೆಮಾಗಳ ಕಥೆಗಾರ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಎಡಿಟರ್ ಎಲ್ಲವೂ ಅವನೇ. ನಂತರ ಬಂತು ನೋಡಿ ಸಾಲು ಸಾಲು ಚಿತ್ರಗಳು. The Circus, Gold Rush, City Lights, Modern Times… ಎಲ್ಲವೂ ಸೂಪರ್‌ಹಿಟ್. ತನ್ನ ಮೊದಲ ಟಾಕಿ ಸಿನೆಮಾ ಆಗಿ The Great Dictator(1940) ತೆರೆಗೆ ತಂದ ಚಾರ್ಲಿ. ಅದು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನನ್ನು ಅಣಕಿಸುವ ಸಿನೆಮಾ. ಆಗ ಹಿಟ್ಲರನು ಜೀವಂತ ಇದ್ದ. ಆ ಸಿನೆಮಾವನ್ನು ನೋಡಿ ಸಿಟ್ಟು ಮಾಡಿಕೊಂಡು ಆತನು ಚಾರ್ಲಿಯನ್ನು ಕೊಂದೇ ಬಿಡ್ತಾನೆ ಎಂಬ ಸುದ್ದಿಯು ಎಲ್ಲೆಡೆ ಹರಡಿತ್ತು. ಆದರೆ ಆ ಸಿನೆಮಾವನ್ನು ನೋಡಿದ ಹಿಟ್ಲರ್ ಬಿದ್ದು ಬಿದ್ದು ನಕ್ಕು ಬಿಟ್ಟನು ಮತ್ತು ಚಾರ್ಲಿಗೆ ಶಾಬಾಷ್ ಹೇಳಿದ್ದ ಅನ್ನೋದೇ ಬಹುದೊಡ್ಡ ಪ್ರಶಸ್ತಿ.

ನನಗೆ ಸಿನೆಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದ ಚಾರ್ಲಿ

ದಾಖಲೆಯ ಪ್ರಕಾರ ಆತ ಮಾಡಿದ ಒಟ್ಟು ಸಿನೆಮಾಗಳು 83. ‘ನನಗೆ ಸಿನೆಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ’ ಅಂತ ಹೇಳುತ್ತಿದ್ದ ಆತ ಸಾಯುವವರೆಗೂ(1977) ಸಿನೆಮಾಗಳಲ್ಲಿ ಮುಳುಗಿಬಿಟ್ಟಿದ್ದ. ಅವನ ಸಿನೆಮಾಗಳು ಕೇವಲ ನಗುವುದಕ್ಕಾಗಿ ಮಾತ್ರ ಇರದೇ ವಿಡಂಬನೆ, ವ್ಯಂಗ್ಯ, ಪ್ರೀತಿ, ಕಣ್ಣೀರು ಮತ್ತು ಪ್ರೇಮಗಳಿಂದ ಶ್ರೀಮಂತವಾಗಿ ಇದ್ದವು. ಅದರಲ್ಲಿ ಗೋಲ್ಡ್ ರಶ್, ಸಿಟಿ ಲೈಟ್ಸ್, ಮಾಡರ್ನ್ ಟೈಮ್ಸ್ ಮತ್ತು ದಿ ಗ್ರೇಟ್ ಡಿಕ್ಟೇಟರ್ ಸಿನೆಮಾಗಳು ಜಗತ್ತಿನ ಅತಿ ಶ್ರೇಷ್ಟ ಸಿನೆಮಾಗಳ ಸಾಲಿನಲ್ಲಿ ಸ್ಥಾನವನ್ನು ಪಡೆದವು. ಚಾರ್ಲಿಯ ಸಿನೆಮಾಗಳು ಎಷ್ಟು ರೋಚಕವಾಗಿ ಇದ್ದವೋ ಅವನ ಬದುಕು ಅಷ್ಟೇ ದುರಂತ ಆಗಿತ್ತು.

ಚಾಪ್ಲಿನ್ ಬದುಕಲ್ಲಿ ವಿವಾದಗಳು ಬೆನ್ನು ಬಿಡಲಿಲ್ಲ

ನೂರಾರು ವಿವಾದಗಳು ಅವನನ್ನು ಹಿಂಡಿ ಹಿಪ್ಪೆ ಮಾಡಿದವು. ತನ್ನ ಸಿನೆಮಾದಲ್ಲಿ ಅಭಿನಯಿಸಿದ ಹದಿಹರೆಯದ ಎಲ್ಲ ಚಂದದ ಹುಡುಗಿಯರನ್ನು ಚಾರ್ಲಿ ಮಿತಿಗಿಂತ ಹೆಚ್ಚು ಮೋಹಿಸಿದ್ದ. ಜೀವನದಲ್ಲಿ 3 ಬಾರಿ ಮದುವೆಯಾಗಿ 11 ಮಕ್ಕಳನ್ನು ಪಡೆದ.ಅದರ ನಂತರವೂ ಅವನ ದಾಹ ನೀಗಲಿಲ್ಲ. ಕೊನೆಯ ಕೆಲವು ಸಿನೆಮಾಗಳು ಸೋತು ಹೋದಾಗ ಚಾರ್ಲಿಯು ಕುಸಿದು ಹೋದರೂ ಸಿನೆಮಾ ಮಾಡುವುದನ್ನು ಬಿಡಲಿಲ್ಲ. ಚಾಪ್ಲಿನ್ ಕೊನೆಯ ಸಿನೆಮಾಗಳು ಪೂರ್ಣವಾಗಿ ಸೋತವು.

ಇನ್ನು ಸಿನೆಮಾ ಮಾಡುವುದಿಲ್ಲ ಅಂದ ಚಾಪ್ಲಿನ್

ಅವನ ಜೀವನದ ಒಂದು ಘಟನೆ ನಾನು ಉಲ್ಲೇಖ ಮಾಡಲೇಬೇಕು. ಅವನು ಜೀವಂತವಾಗಿ ಇದ್ದಾಗ ಲಂಡನ್ನಿನಲ್ಲಿ ಒಂದು ದೊಡ್ಡ ಸ್ಪರ್ಧೆ ನಡೆಯಿತು. ಅದು ಚಾರ್ಲಿಯನ್ನು, ಅವನ ಡ್ರೆಸ್ಸನ್ನು, ಅವನ ನಡಿಗೆ, ಅವನ ಅಭಿನಯ.. ಇತ್ಯಾದಿಗಳನ್ನು ಅನುಕರಣೆ ಮಾಡುವ ಸ್ಪರ್ಧೆ. ಕುತೂಹಲದಿಂದ ಚಾರ್ಲಿ ಚಾಪ್ಲಿನ್ ಆ ಸ್ಪರ್ಧೆಯಲ್ಲಿ ಬೇರೆ ಹೆಸರು ಕೊಟ್ಟು ಭಾಗವಹಿಸಿದ್ದನು. ಆದರೆ ಫಲಿತಾಂಶ ಬಂದಾಗ ಚಾರ್ಲಿಗೆ ನಿಜವಾದ ಶಾಕ್ ಆಯಿತು. ಏಕೆಂದರೆ ಅವನಿಗೇ ಸೆಕೆಂಡ್ ಪ್ರೈಜ್ ಬಂದಿತ್ತು. ಅಂದು ವೇದಿಕೆ ಹತ್ತಿದ ಚಾಪ್ಲಿನ್ ವಿಜೇತನನ್ನು ಅಪ್ಪಿಕೊಂಡು ಅಭಿನಂದಿಸಿದನು ಮತ್ತು ಇನ್ನು ಯಾವ ಸಿನೆಮಾ ಕೂಡ ಮಾಡುವುದಿಲ್ಲ ಎಂದು ಆ ವೇದಿಕೆಯಲ್ಲಿಯೇ ಘೋಷಿಸಿದ. ಅವನ ಕೊನೆಯ ಸಿನೆಮಾ A Countess from Hong Kong (1967).
ತನ್ನ ಅದ್ಭುತ ಅಭಿನಯ ಹಾಗೂ ಸಿನೆಮಾಗಳ ಮೂಲಕ ಇಡೀ ಜಗತ್ತನ್ನು ನಗಿಸಿದ ಅವನಿಗೆ ನಿನ್ನೆ (ಏಪ್ರಿಲ್ 16) ಹುಟ್ಟುಹಬ್ಬ. ಚಾಪ್ಲಿನ್ ಹುಟ್ಟಿ ನಿನ್ನೆಗೆ 125 ವರ್ಷ ಆಯಿತು.
A day without laughter is a day wasted ಎಂದು ಹೇಳಿದ್ದ ಚಾಪ್ಲಿನ್ ಅದರಂತೆ ಬದುಕಿದ್ದ. ತನ್ನ ನೂರಾರು ನೋವುಗಳನ್ನು ನುಂಗಿ ಜಗತ್ತನ್ನು ನಗಿಸಿದ ಚಾರ್ಲಿ ಚಾಪ್ಲಿನ್ ಬದುಕು ಅವನ ಸಿನೆಮಾಗಳಷ್ಟೆ ರೋಚಕ.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top