ಪುತ್ತೂರು : ಪುತ್ತೂರು ವಿಧಾನಸಭಾ ಕೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಪಕ್ಷೇತರನಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ನೀಡಿದರು.
ಪುತ್ತೂರಿನ ದರ್ಬೆಯಿಂದ ಮಿನಿ ವಿಧಾನಸೌಧದ ವರೆಗೆ ಮೆರವಣಿಗೆಯ ಮೂಲಕ ತೆರಳಿದ ಅರುಣ್ ಪುತ್ತಿಲ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆಗೆ ಮುನ್ನ ಹಿಂದೂ ಸಂಘಟನೆಗಳ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಕಿಕ್ಕಿರಿದ ಜನಸ್ತೋಮ
ಸಂಘ ಪರಿವಾರದ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು ಮೆರವಣಿಗೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿತು. ಮೆರವಣಿಗೆಯ ಮೊದಲು ಅರುಣ್ ಪುತ್ತಿಲ ಅವರು ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದರ್ಬೆಯಲ್ಲಿ ಶಂಖನಾದ, ಕಹಳೆ ಮೊಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಸೇರಿದಂತೆ ಹಲವೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ನೆರೆದಿದ್ದರು. ಹಿಂದೂ ಮುಖಂಡ ದಿವಂಗತ ಮೂಲ್ಕಿ ಸುಖಾನಂದ ಶೆಟ್ಟಿ ಅವರ ಸಹೋದರ ಸಂತೋಷ್ ಶೆಟ್ಟಿ, ಲಕ್ಷ್ಮೀಶ ತಂತ್ರಿ ಅವರು ಕಹಳೆ ಊದಿ ಚಾಲನೆ ನೀಡಿದರು.
ಕೇಸರಿ ಕಲರವ:
ಕೇಸರಿ ಶಾಲು ಧರಿಸಿದ ಸಾವಿರಾರು ಕಾರ್ಯಕರ್ತರು ಶಾಲು ಮೇಲೆತ್ತಿ ಬೀಸುವ ಮೂಲಕ ಅರುಣ್ ಪುತ್ತಿಲ ಅವರಿಗೆ ಸ್ವಾಗತ ಕೋರಿದರು. ಬ್ಯಾಂಡ್, ವಾದ್ಯದ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದ ಪುತ್ತಿಲ ಅವರಿಗೆ ರಸ್ತೆಯುದ್ದಕ್ಕೂ ಹೂವಿನ ಹಾರ ಹಾಕಲಾಯಿತು. ದರ್ಬೆಯಿಂದ ಮುಖ್ಯ ರಸ್ತೆ ಮೂಲಕ ಸಾಗಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.