ಸುಡಾನ್‌ನಲ್ಲಿ ಸೇನಾ ಸಂಘರ್ಷ ತೀವ್ರ : ಭಾರತೀಯ ಪ್ರಜೆ ಸೇರಿ 65 ಸಾವು

500ಕ್ಕೂ ಅಧಿಕ ಮಂದಿಗೆ ಗುಂಡೇಟು

ಖಾರ್ಟೂಮ್ : ಸುಡಾನ್‌ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷ ತೀವ್ರಗೊಂಡಿದ್ದು, ಓರ್ವ ಭಾರತೀಯ ಸೇರಿದಂತೆ ಕನಿಷ್ಠ 65 ಮಂದಿ ಸಾವಿಗೀಡಾಗಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ಮಿಲಿಟರಿ ಹಾಗೂ ಪ್ಯಾರಾಮಿಲಿಟರಿ ನಡುವೆ ಸಂಘರ್ಷ ಸಂಭವಿಸಿದ ಪರಿಣಾಮ ಕನಿಷ್ಠ 65 ಮಂದಿ ಸಾವಿಗೀಡಾಗಿದ್ದು, ಈ ಪೈಕಿ ಸುಡಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಭಾರತ ಮೂಲದ ವ್ಯಕ್ತಿ ಕೂಡ ಸೇರಿದ್ದಾರೆ ಎನ್ನಲಾಗಿದೆ. ಮೃತ ವ್ಯಕ್ತಿಯ ದೇಹದ ಮೇಲೆ ಗುಂಡಿನ ಗಾಯಗಳಾಗಿದ್ದು, ಆತ ಸೇನಾ ಗುಂಡಿಗೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ.

ಸೂಡಾನ್‌ನ ದಾಲ್ ಗ್ರೂಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆ ಆಲ್ಬರ್ಟ್ ಆಗಸ್ಟಿನ್ ನಿನ್ನೆ ದಾರಿತಪ್ಪಿ ಸಂಘರ್ಷ ಪೀಡಿತ ಪ್ರದೇಶಕ್ಕೆ ತೆರಳಿದ್ದಾಗ ಗುಂಡು ತಗುಲಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಎಂದು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ರಾಯಭಾರ ಕಚೇರಿ ಆಗಸ್ಟೀನ್ ಅವರ ಕುಟುಂಬ ಮತ್ತು ವೈದ್ಯಕೀಯ ಪ್ರಾಧಿಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಮಾಹಿತಿ ನೀಡಿದೆ.
ಘರ್ಷಣೆ ಇನ್ನೂ ಮುಂದುವರಿದಿದ್ದು ಸಾವುನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸುಡಾನ್‌ನ ರಾಜಧಾನಿಯಾದ ಖಾರ್ಟೂಮ್‌ ಪ್ರದೇಶದ ವಿವಿಧೆಡೆ ಶಸಸ್ತ್ರ ಸೇನೆ ಮತ್ತು ಅರೆಸೈನಿಕ ಪಡೆ ನಡುವೆ ನಡೆಯುತ್ತಿರುವ ಸಮರ ರಾಜಕೀಯ ಸಂಘರ್ಷವಾಗಿದೆ. ಶನಿವಾರ ಬೆಳಗ್ಗಿನಿಂದ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ನಡೆಯುತ್ತಿದ್ದ ಸೈನಿಕರ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಗುಂಡಿನ ಚಕಮಕಿಯಿಂದಾಗಿ ಸಾವುನೋವಿಗೆ ತುತ್ತಾದವರಲ್ಲಿ ಅಮಾಯಕ ನಾಗರಿಕರ ಸಂಖ್ಯೆಗಳನ್ನು ಮಾತ್ರ ಪ್ರಕಟಿಸಲಾಗಿದೆ.



































 
 

ಸುಡಾನ್‌ನಲ್ಲಿರುವ ಮಿಲಿಟರಿ ಆಡಳಿತದ ವಿರುದ್ಧ ಅರೆಸೇನಾಪಡೆ ದಂಗೆ ಎದ್ದಿದ್ದು, ಖಾರ್ಟೂಮ್‌ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಧ್ಯಕ್ಷರ ನಿವಾಸವನ್ನು ವಶಕ್ಕೆ ಪಡೆಯಲು ಯತ್ನಿಸಿತ್ತು. ಈ ಸಂದರ್ಭ ಮಿಲಿಟರಿ ಪ್ರತಿರೋಧ ಒಡ್ಡಿದೆ. ಆಗ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top