ಪೊಲೀಸ್, ಪತ್ರಕರ್ತರ ಎದುರೇ ಕುಖ್ಯಾತ ಪಾತಕಿ, ಬಿಎಸ್‌ಪಿ ನಾಯಕ ಅತೀಕ್‌ ಅಹ್ಮದ್‌ ಹತ್ಯೆ

ಮಗ ಎನ್‌ಕೌಂಟರ್‌ಗೆ ಬಲಿಯಾದ ಎರಡೇ ದಿನದಲ್ಲಿ ತಂದೆಯ ಹತ್ಯೆ

ಲಖನೌ : ನೂರಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ಉತ್ತರ ಪ್ರದೇಶದ ದರೋಡೆಕೋರ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ಅಹ್ಮದ್‌ನನ್ನು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯುತ್ತಿದ್ದಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಪತ್ರಕರ್ತರ ಸೋಗಿನಲ್ಲಿ ಬಂದ ಹಂತಕರು ಅಹ್ಮದ್‌ ಸಹೋದರರನ್ನು ಪೊಲೀಸರು ಮತ್ತು ಪತ್ರಕರ್ತರ ಎದುರೇ ಅತಿ ಸಮೀಪದಿಂದ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿ ಕೊಂದಿದ್ದಾರೆ. ಇಡೀ ಹತ್ಯೆ ಕೃತ್ಯ ವೀಡಿಯೊದಲ್ಲಿ ಸೆರೆಯಾಗಿದೆ.

ಪುತ್ರ ಅಸಾದ್‌ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಎರಡೇ ದಿನದಲ್ಲಿ ಅತೀಕ್‌ ಅಹ್ಮದ್‌ ಕೂಡ ಹತ್ಯೆಯಾಗಿದ್ದಾನೆ. ಎರಡು ದಿನಗಳ ಹಿಂದೆಯಷ್ಟೇ ಯುಪಿಯ ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ, ಅತೀಕ್ ಅಹ್ಮದ್‌ನ ಪುತ್ರ ಅಸದ್ ಕೂಡ ಹತನಾಗಿದ್ದ.
ಜನರ ಗುಂಪಿನಿಂದ ದಿಡೀರ್‌ನೇ ಮುಂದೆ ಬಂದ ಮೂವರು ಅತಿಕ್ ಅಹ್ಮದ್ ಮತ್ತು ಅವನ ಸಹೋದರನ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಿದ್ದಾರೆ.
ದರೋಡೆಕೋರ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ ಅಹ್ಮದ್ ಜೈಲಿನ ಹೊರಗಡೆ ಬಿಗಿ ಪೊಲೀಸ್‌ ಭದ್ರತೆಯ ನಡುವೆಯೇ ಸುದ್ದಿಗಾರರೊಂದಿಗೆ ಸಂವಾದ ನಡೆಸುತ್ತಿದ್ದರು. ಇಬ್ಬರಿಗೂ ಪೊಲೀಸರು ಕೈಕೋಳ ಹಾಕಿದ್ದರು. ಈ ವೇಳೆ ಏಕಾಏಕಿ ಜನಸಂದಣಿಯಿಂದ ಅಪರಿಚಿತ ವ್ಯಕ್ತಿಯೋರ್ವ ಇಬ್ಬರ ತಲೆಗೂ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ.































 
 

ಪತ್ರಕರ್ತರ ಕ್ಯಾಮರಾ ಮುಂದೆಯೇ ಅತಿಕ್‌ ಮತ್ತು ಅಶ್ರಫ್‌ ಕೊಲೆ ನಡೆದಿರುವುದು ಇಡೀ ದೇಶದ ಗಮನ ಸೆಳೆದಿದೆ. ಅಹ್ಮದ್ ಮತ್ತು ಆತನ ಸಹೋದರನನ್ನು ಹೊಡೆದುರುಳಿಸಿದ ನಂತರ, ಮೂವರು ಹಂತಕರು ತಕ್ಷಣವೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸನ್ನಿ, ಲವಲೇಶ್ ಮತ್ತು ಅರುಣ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಮೂವರೂ ಹಂತಕರು ಪತ್ರಕರ್ತರ ಸೋಗಿನಲ್ಲಿ ಬಂದು, ಅತಿಕ್‌ ಮತ್ತು ಅಶ್ರಫ್‌ ಅಹ್ಮದ್‌ ತಲೆಗೆ ಅತೀ ಸಮೀಪದಿಂದ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೂವರೂ ಹಂತಕರನ್ನು ಬಂಧಿಸಿರುವ ಪೊಲೀಸರು, ಇವರು ಅಹ್ಮದ್‌ ಕುಟುಂಬದ ವೈರಿ ಗ್ಯಾಂಗ್‌ನ ಗುಂಪಿನ ಸದಸ್ಯರಾಗಿರಬಹುದು ಎಂದು ಶಂಕಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದ್ದಾರೆ. ಮಾಜಿ ರಾಜಕಾರಣಿ ಅತಿಕ್ ಅಹ್ಮದ್ ವಿರುದ್ಧ ಅಪಹರಣ ಮತ್ತು ಕೊಲೆ ಸೇರಿದಂತೆ ಸುಮಾರು 100 ಪ್ರಕರಣಗಳು ದಾಖಲಾಗಿವೆ.
2006ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲು, ಉತ್ತರ ಪ್ರದೇಶದ ಪೊಲೀಸ್ ತಂಡವು ಗುಜರಾತ್‌ನ ಅಹಮದಾಬಾದ್‌ನ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿದ್ದ ಅತಿಕ್ ಅಹ್ಮದ್‌ನನ್ನು ಮಾ.26ರಂದು ಪ್ರಯಾಗ್‌ರಾಜ್‌ಗೆ ಕರೆತಂದಿತ್ತು. ಮಾರ್ಚ್ 28ರಂದು ಅಪಹರಣ ಪ್ರಕರಣದಲ್ಲಿ ನ್ಯಾಯಾಲಯವು ಅಹ್ಮದ್ ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ತನ್ನನ್ನು ಮತ್ತು ತನ್ನ ಕುಟುಂಬವನ್ನು ತಪ್ಪಾಗಿ ಸಿಲುಕಿಸಲಾಗಿದೆ ಮತ್ತು ಉತ್ತರ ಪ್ರದೇಶ ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ನನ್ನನ್ನು ಕೊಲೆ ಮಾಡಬಹುದು ಎಂದು ಆರೋಪಿಸಿ, ಅತಿಕ್ ಅಹ್ಮದ್ ರಕ್ಷಣೆಗಾಗಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದ.
ಅತಿಕ್ ಅಹ್ಮದ್ ಸಮಾಜವಾದಿ ಪಕ್ಷದ ಸಂಸದ‌ನಾಗಿದ್ದ. ಹಲವಾರು ಅಪಹರಣ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ. 2005ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಶಾಸಕ ರಾಜು ಪಾಲ್ ಅವರ ಕೊಲೆ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಕೊಲೆಯಾದ ಶಾಸಕರ ವಕೀಲ ಉಮೇಶ್ ಪಾಲ್ ಅವರ ಹತ್ಯೆಯಲ್ಲೂ ಈಗತನ ಕೈವಾಡವಿದೆ ಎಂದು ಹೇಳಲಾಗಿತ್ತು. ಅತಿಕ್‌ ಅಹ್ಮದ್‌ ಮತ್ತು ಅಶ್ರಫ್‌ ಅಹ್ಮದ್‌ ಕೊಲೆ ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಉತ್ತರ ಪ್ರದೇಶದಲ್ಲಿ ಇದು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ನಾಂದಿ ಹಾಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top