ಮೋದಿ ಸರ್ಕಾರದ ಅಸಮರ್ಥತೆಯಿಂದ ಪುಲ್ವಾಮ ದಾಳಿ ನಡೆದು 40 ಭಾರತೀಯ ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ನಮ್ಮ ಯೋಧರಿಗೆ ವಿಮಾನ ಸಿಕ್ಕಿದ್ದರೆ ಈ ದಾಳಿಯನ್ನು ತಪ್ಪಿಸಬಹುದಿತ್ತು. ಈ ಬಹುದೊಡ್ಡ ತಪ್ಪಿಗೆ ಕ್ರಮ ತೆಗೆದುಕೊಳ್ಳುವ ಬದಲು ನೀವು ವಿಷಯವನ್ನು ನಿಗ್ರಹಿಸಿ ನಿಮ್ಮ ಇಮೇಜ್‌ಗೆ ಧಕ್ಕೆ ಆಗದಂತೆ ನೋಡಿಕೊಂಡಿರಿ. ಪುಲ್ವಾಮದ ಕುರಿತು ಸತ್ಯಪಾಲ್ ಮಲಿಕ್‌ರವರ ಹೇಳಿಕೆಯಿಂದ ದೇಶವೇ ಬೆಚ್ಚಿಬಿದ್ದಿದೆ ಎಂದು ಕಾಂಗ್ರೆಸ್ ಹೇಳಿದೆ.
ಮೋದಿ ಸರ್ಕಾರದ ಅಸಮರ್ಥತೆಯಿಂದ 2019ರ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ನಡೆದು 40 ಭಾರತೀಯ ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಸಂದರ್ಶನ ಬಿತ್ತರಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ನರೇಂದ್ರ ಮೋದಿಯವರ ಮೇಲೆ ಟೀಕಾಪ್ರಹಾರ ನಡೆಸಿದೆ. ರಾಹುಲ್ ಗಾಂಧಿಯವರು ವೈರ್ ವರದಿಯನ್ನು ಟ್ವೀಟ್ ಮಾಡಿದ್ದು, “ಪ್ರಧಾನಿಯವರು ಭ್ರಷ್ಟಾಚಾರವನ್ನು ಹೆಚ್ಚು ದ್ವೇಷಿಸುವುದಿಲ್ಲ” ಎಂದು ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮೋದಿಯವರ ಬಗ್ಗೆ ಮಲಿಕ್ ಮಾಡಿದ ಆರೋಪಗಳನ್ನು ಪುನರಾವರ್ತಿಸಿದೆ. 2019 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತಮ್ಮ ವೈಯಕ್ತಿಕ ಇಮೇಜ್ ಅನ್ನು ಉಳಿಸಲು ಮೋದಿ ಅವರು ಪುಲ್ವಾಮ ಘಟನೆಯನ್ನು “ನಿಗ್ರಹಿಸಿದ್ದಾರೆ” ಎಂದು ಕಾಂಗ್ರೆಸ್ ಆರೋಪಿಸಿದೆ.
ದಿ ವೈರ್ ಪತ್ರಕರ್ತ ಕರಣ್ ಥಾಪರ್‌ರವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, “ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯು ಭಾರತೀಯ ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯ ಮತ್ತು ನಿರ್ದಿಷ್ಟವಾಗಿ ಗೃಹ ಸಚಿವಾಲಯದ ಅಸಮರ್ಥತೆಯ ಪರಿಣಾಮವಾಗಿದೆ. ಆಗ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು. ಸಿಆರ್‌ಪಿಎಫ್ ತನ್ನ ಜವಾನರನ್ನು ಸಾಗಿಸಲು ವಿಮಾನವನ್ನು ಕೇಳಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಅದನ್ನು ನಿರಾಕರಿಸಿತು” ಎಂದು ಮಲಿಕ್ ದೂರಿದ್ದಾರೆ.
ದಾಳಿ ನಡೆದ ದಿನ ಸಂಜೆಯೇ ಪ್ರಧಾನಿ ಮೋದಿಯವರಿಗೆ ಈ ವೈಫಲ್ಯಗಳ ಬಗ್ಗೆ ತಿಳಿಸಿದೆ. ನಮ್ಮ ತಪ್ಪಿನಿಂದಾಗಿ 40 ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ವಿವರಿಸಿದೆ. ಆದರೆ ಅವರು ಯಾರಿಗೂ ಹೇಳಬೇಡಿ, ಸುಮ್ಮನಿದ್ದುಬಿಡಿ ಎಂದರು. ಎನ್‌ಎಸ್‌ಎ ಅಜಿತ್ ದೋವಲ್ ಕೂಡ ನನ್ನ ಬಾಯಿ ಮುಚ್ಚಿಸಿದರು. ಆಗ ನನಗೆ ತಕ್ಷಣವೇ ಅರ್ಥವಾಯಿತು, ಅವರ ಉದ್ದೇಶ ಪಾಕಿಸ್ತಾನದ ಮೇಲೆ ದೋಷಾರೋಪ ಮಾಡಿ ಚುನಾವಣೆಯಲ್ಲಿ ಸರ್ಕಾರ ಮತ್ತು ಬಿಜೆಪಿಗೆ ಲಾಭ ಪಡೆಯುವುದಾಗಿತ್ತು ಎಂದು ಸತ್ಯಪಾಲ್ ಮಲಿಕ್ ಸಂದರ್ಶನದಲ್ಲಿ ಹೇಳಿದ್ದಾರೆ.
ಪುಲ್ವಾಮಾ ಘಟನೆಯಲ್ಲಿ 300 ಕೆಜಿ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಹೊತ್ತ ಕಾರು ಪಾಕಿಸ್ತಾನದಿಂದ ಬಂದಿದ್ದು, ಜಮ್ಮು ಮತ್ತು ಕಾಶ್ಮೀರದ ರಸ್ತೆಗಳು ಮತ್ತು ಹಳ್ಳಿಗಳಲ್ಲಿ 10-15 ದಿನಗಳ ಕಾಲ ಯಾರಿಗೂ ಗೊತ್ತಾಗದಂತೆ ಮತ್ತು ಯಾರಿಗೂ ತಿಳಿಯದಂತೆ ಸಂಚರಿಸುತ್ತಿತ್ತು ಎಂದರೆ ಇದು ಗಂಭೀರ ಗುಪ್ತಚರ ವೈಫಲ್ಯ ಅಲ್ಲವೇ ಎಂದಿದ್ದಾರೆ.
ಭ್ರಷ್ಟಾಚಾರದ ವಿಷಯಕ ಕುರಿತು ಮಾತನಾಡಿದ ಅವರು, “ಹೈಡ್ರೋ ಎಲೆಕ್ಟ್ರಿಕ್ ಯೋಜನೆ ಮತ್ತು ರಿಲಯೆನ್ಸ್ ಇನ್ಸೂರೆನ್ಸ್ ಯೋಜನೆಗೆ ಅನುಮತಿ ಪಡೆಯಲು ಬಿಜೆಪಿ ಆರ್‌ಎಸ್‌ಎಸ್ ಮುಖಂಡ ರಾಮ್ ಮಾಧವ್ ಬಂದಿದ್ದರು. ಆ ಯೋಜನೆಗಳಿಗೆ ಸಹಿ ಹಾಕಿದ್ದರೆ ನನಗೆ 300 ಕೋಟಿ ಸಿಗುತ್ತದೆ ಎಂದು ಜನ ಮಾತನಾಡುತ್ತಿದ್ದರು. ಆದರೆ ನಾನು ಆ ತಪ್ಪು ಕೆಲಸ ಮಾಡಲಿಲ್ಲ. ರಾಮ್ ಮಾಧವ್ ಎಷ್ಟೇ ಪ್ರಯತ್ನ ಪಟ್ಟರೂ ನಾನು ಆ ಯೋಜನೆಗಳನ್ನು ಜಾರಿಗೊಳಿಸಲಿಲ್ಲ ಎಂದಿದ್ದಾರೆ.
ಅದೇ ರೀತಿ ಗೋವಾದ ರಾಜ್ಯಪಾಲನಾಗಿದ್ದಾಗ ಅಲ್ಲಿನ ಭ್ರಷ್ಟಾಚಾರಗಳ ಕುರಿತು ಪ್ರಧಾನಿ ಮೋದಿಯವರಿಗೆ ದೂರು ನೀಡಿದ್ದೆ. ಅವುಗಳನ್ನು ಸರಿಪಡಿಸುವ ಬದಲು ನಿರ್ಲಕ್ಷ್ಯ ಮಾಡಿದ್ದಲ್ಲದೆ ನನ್ನನ್ನು ಗೋವಾದ ರಾಜ್ಯಪಾಲ ಸ್ಥಾನದಿಂದ ಕಿತ್ತು ಮೇಘಾಲಯಕ್ಕೆ ಕಳಿಸಿದರು. ಪ್ರಧಾನಿಯವರ ಸುತ್ತಲಿನ ಜನರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಆಗಾಗ್ಗೆ ಪ್ರಧಾನಿ ಕಚೇರಿಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ಮೋದಿಯವರ ಗಮನಕ್ಕೆ ತಂದಿದ್ದೇನೆ, ಆದರೆ ಪ್ರಧಾನಿ ಕಾಳಜಿ ತೋರುತ್ತಿಲ್ಲ. ಹಾಗಾಗಿ ನಾನು ಖಚಿತವಾಗಿ ಹೇಳಬಲ್ಲೆ ಭ್ರಷ್ಟಾಚಾರ ಕುರಿತು ನರೇಂದ್ರ ಮೋದಿಯವರಿಗೆ ಹೆಚ್ಚಿನ ದ್ವೇಷವಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.