ಉಡುಪಿ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸುತ್ತಿವೆ. ಸಭೆ-ಸಮಾರಂಭಗಳನ್ನು ಏರ್ಪಡಿಸುವುದು, ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೋರುತ್ತಿದ್ದಾರೆ. ಈಗ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಕೋರಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸುಕಮಾರ ಶೆಟ್ಟಿ ಬದಲಾಗಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಗುರುರಾಜ್ ಗಂಟಿಹೊಳೆ ಅವರು ಈಗ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬಳಿ ಮನವಿ ಮಾಡಿದ್ದಾರೆ. ಈ ವೇಳೆ ಕೆಲವು ಸಮಯ ಮಾತುಕತೆ ನಡೆಸಿದ ಗುರುರಾಜ್ ಗಂಟಿಹೊಳೆ ಅವರು, ಕ್ಷೇತ್ರದ ಚಿತ್ರಣದ ಬಗ್ಗೆ ಮಾಹಿತಿ ನೀಡಿದರು. ಬಳಿಕ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ, ನನ್ನ ಸಂಪೂರ್ಣ ಬೆಂಬಲ ನಿಮಗೆ ಇದೆ ಎಂದು ಆಶೀರ್ವದಿಸಿದರು.
ಇನ್ನು ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಗುರುರಾಜ ಗಂಟಿಹೊಳೆ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು.
ರಾಜಕೀಯ ನಿವೃತ್ತಿ ಘೋಷಿಸಿರುವ ಹಾಲಾಡಿ
ಕಳೆದ 25 ವರ್ಷಗಳಿಂದ ಕುಂದಾಪುರ ಕ್ಷೇತ್ರದ ಶಾಸಕರಾಗಿ ಅಜೇಯರಾಗಿ ಉಳಿದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಇವರು ಅಜಾತಶತ್ರು ರಾಜಕಾರಣಿಯಾಗಿರುವ ಜತೆಗೆ ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಹೊಂದಿದವರು. ಈಗ ಈ ಕ್ಷೇತ್ರಕ್ಕೆ ತಮ್ಮಗುರು ಎ.ಜಿ. ಕೊಡ್ಡಿ ಅವರ ಮಗ ಕಿರಣ್ ಕೊಡ್ಲಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ.