ಬೆಂಗಳೂರು : ಕನ್ನಡ ನಟ ಚೇತನ್ ಅಹಿಂಸಾ ಅವರಿಗೆ ಭಾರತದಲ್ಲಿ ಬಂದು ವಾಸಿಸಲು ನೀಡಲಾಗಿದ್ದ ಭಾರತೀಯ ಸಾಗರೋತ್ತರ ಪೌರತ್ವವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಕುರಿತಂತೆ, ಏ. 14ರಂದು (ಶುಕ್ರವಾರ) ಅವರಿಗೆ ವಿದೇಶಿಗರ ಪ್ರಾದೇಶಿಕ ನೋಂದಾವಣಿ ಕಚೇರಿಯಿಂದ ವತಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅನಪೇಕ್ಷಿತ ಹಾಗೂ ಆಕ್ಷೇಪಾರ್ಹ ಬರಹಗಳನ್ನು ಹಾಕುವ ಮೂಲಕ, ಭಾರತದಲ್ಲಿ ಸಾಮಾಜಿಕ ಶಾಂತಿ ಹಾಗೂ ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತರುವುದನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
15 ದಿನದೊಳಗೆ OIC ಕಾರ್ಡ್ ಹಿಂದಿರುಗಿಸಲು ಸೂಚನೆ
ಏ. 14ರಂದು, ಚೇತನ್ ಅಹಿಂಸಾ ಅವರಿಗೆ ಪತ್ರವೊಂದು ಬಂದಿದೆ. ಅದು ಮಾ. 28ರಂದು ವಿದೇಶಿಗರ ಪ್ರಾಂತೀಯ ನೋಂದಾವಣೆ ಕಚೇರಿಯಿಂದ ಬಂದಿದ್ದ ನೋಟಿಸ್. ಅದರಲ್ಲಿ ಚೇತನ್ ಅಹಿಂಸಾ ಅವರ ಒಐಸಿ ರದ್ದುಗೊಳಿಸಿರುವುದನ್ನು ತಿಳಿಸಲಾಗಿದೆ. ಜೊತೆಗೆ, ‘ನಿಮಗೆ ನೀಡಲಾಗಿರುವ ಐಒಸಿ ಕಾರ್ಡನ್ನು ಇನ್ನು 15 ದಿನದಲ್ಲಿ ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಸೂಚಿಸಲಾಗಿದೆ.
ಈ ಕುರಿತಂತೆ, ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಚೇತನ್, ಏ. 14ರ ಅಂಬೇಡ್ಕರ್ ಜಯಂತಿಯಂದೇ, ಕೇಂದ್ರ ಗೃಹ ಸಚಿವಾಲಯವು ಭಾರತದಲ್ಲಿ ಉಳಿಯಲು ನನ್ನ ವೀಸಾವನ್ನು ರದ್ದುಗೊಳಿಸಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ, ಹಿಂದುತ್ವವನ್ನು ಪ್ರಶ್ನಿಸಿ ಅವಹೇಳನಕಾರಿ ಪೋಸ್ಟ್ ಒಂದನ್ನು ಹಾಕಿದ್ದರಿಂದಾಗಿ ಮಾ. 21ರಂದು ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಆನಂತರ ಅವರು, ಜಾಮೀನಿನ ಮೇಲೆ ಆಚೆ ಬಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕುತ್ತಲೇ ಇದ್ದ ಅವರಿಗೆ 2022, ಎಫ್ಆರ್ ಆರ್ ಒ ವತಿಯಿಂದ ನೋಟಿಸ್ ಜಾರಿಯಾಗಿತ್ತು. ಅದರಲ್ಲಿ, ಚೇತನ್ ವಿರುದ್ಧ ಕೇಳಿಬಂದಿರುವ ಕೆಲವು ಆಪಾದನೆಗಳನ್ನು ಉಲ್ಲೇಖಿಸಲಾಗಿತ್ತು. ಅವುಗಳಲ್ಲಿ ಮುಖ್ಯವಾಗಿ, ಚೇತನ್ ಅವರು ನ್ಯಾಯಾಧೀಶರನ್ನು ನಿಂದಿಸಿರುವುದನ್ನು, ಕೆಲವು ಭಾರತ ವಿರೋಧಿ ಹೇಳಿಕೆಗಳನ್ನು ಪೋಸ್ಟ್ ಮಾಡುವುದನ್ನು ಪ್ರಶ್ನಿಸಿದ್ದ ಎಫ್ ಆರ್ ಆರ್ ಸಿ, ಚೇತನ್ ಅವರಿಗೆ ಅವರ ಮೇಲಿನ ಆಪಾದನೆಗಳಿಗೆ ನಿಗದಿತ ಸಮಯದೊಳಗೆ ಉತ್ತರ ಕೊಡಬೇಕು ಎಂದು ಹೇಳಿತ್ತು.