ಇಂದು ತುಳುವರ ಹಬ್ಬ ಬಿಸುಹಬ್ಬ | ತುಳುನಾಡಿನ ತುಳುವರ ಮನೆಗಳಲ್ಲಿ ಸಂಭ್ರಮದ ಆಚರಣೆ

ಪುತ್ತೂರು: ತುಳುವರ ಅತ್ಯಂತ ಮಹತ್ವದ ಹಬ್ಬ ಬಿಸು ಹಬ್ಬ ತುಳುವರ ಹೊಸ ವರ್ಷ ಎಂದೇ  ಪ್ರಚಲಿತದಲ್ಲಿದ್ದು, ಏ.15 ರಂದು ತುಳುನಾಡಿನಲ್ಲಿ ಆಚರಣೆ ಮಾಡಲಾಗುತ್ತಿದೆ.

ಕರ್ನಾಟಕದ ಹಲವು ಕಡೆಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯನ್ನು ಅಚರಿಸಲಾಗುತ್ತದೆ. ಈ ದಿನ ಕುಟುಂಬದ ಸದಸ್ಯರೆಲ್ಲರೂ ಬೇವು – ಬೆಲ್ಲ ಸವಿದು ಹಿರಿಯರ ಆಶೀರ್ವಾದವನ್ನು ಪಡೆದು ನಂತರ ತಮ್ಮ ದಿನವನ್ನು ನಡೆಸುತ್ತಾರೆ. ಕೇರಳದಲ್ಲಿ ವಿಷು ಕಣಿ ಇಡುವ ಸಂಪ್ರದಾಯವಿದೆ. ಈ ದಿನ ವಿಷು ಕಣಿಗೆ ಇಟ್ಟ ವಸ್ತುಗಳನ್ನು ಮೊದಲು ನೋಡುವುದರಿಂದ ಜೀವನದುದ್ದಕ್ಕೂ ಸಮೃದ್ಧಿ, ಸಂಪತ್ತು ಮತ್ತು ಸಂತೋಷ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.

ಬಿಸುಕಣಿ ಹಬ್ಬದಂದು ತುಳುವರು ತಮ್ಮ ಹೊಲದಲ್ಲಿ ಬೆಳೆದ ಭತ್ತದ ತೆನೆ ಸಹಿತ ಇನ್ನಿತರ ಬೆಳೆಗಳನ್ನು ಕಟಾವು ಮಾಡಿ ಅದನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸುವುದು ಬಹಳ ಹಿಂದಿನಿಂದಲೂ ಬಂದ ಪದ್ಧತಿ. ಬೆಳಿಗ್ಗೆ ಎದ್ದು ತುಳಸಿಕಟ್ಟೆ ಅಥವಾ ದೈವದ ಚಾವಡಿ ಬಳಿ ಬಾಳೆ ಎಲೆ ಹಾಕಿ ಎಲೆಯ ಮೇಲೆ ಬೇರೆ ಬೇರೆ ಹಣ್ಣುಗಳು, ಹೂ ಹಿಂಗಾರ, ತರಕಾರಿ, ಚಿನ್ನವನ್ನು ಇಟ್ಟು ಅದನ್ನು ಮಣೆಯ ಮೇಲೆ ಇಡಲಾಗುತ್ತದೆ. ಬಾಳೆ ಎಲೆಯ ನಡುವಿನಲ್ಲಿ ಕನ್ನಡಿಯನ್ನೂ ಇರಿಸಲಾಗುತ್ತದೆ. ಒಂದು ದೀಪವನ್ನೂ ಇರಿಸಲಾಗುತ್ತದೆ.  ಬಳಿಕ ಮನೆಯವರು ಇರಿಸಲಾದ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡುವ ಸಂಪ್ರದಾಯ ಇದೆ.































 
 

ತುಳುನಾಡಿನ ಬಹುತೇಕ ಮನೆಗಳಲ್ಲಿ ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿದ  ಮೇಲೆ ಹೊಸ ಬಟ್ಟೆಗಳನ್ನು ಧರಿಸುವುದು ವಾಡಿಕೆ. ಹೊಸಬಟ್ಟೆ ಧರಿಸಿ ಭೂಮಿತಾಯಿಗೆ ಕೈಮುಗಿದು ಹಿರಿಯ ಆಶೀರ್ವಾದ ಪಡೆಯುತ್ತಾರೆ. ಹಿರಿಯರು ಆಶೀರ್ವಾದ ಮಾಡುವ ಮೂಲಕ ಶುಭವನ್ನು ಹಾರೈಸುತ್ತಾರೆ. ಬಳಿಕ ಅನ್ನ, ಪಾಯಸ, ವಿವಿಧ ಖಾದ್ಯಗಳನ್ನು ಮಾಡಿ ಮನೆಮಂದಿಯೆಲ್ಲಾ ಸಂಭ್ರಮದಿಂದ ಸವಿಯುತ್ತಾರೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಸುಕಣಿ ಉತ್ಸವ :

ವಿಶೇಷವಾಗಿ ಬಿಸು ಹಬ್ಬದಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಬಿಸುಕಣಿ ಇಟ್ಟು ಉತ್ಸವವನ್ನು ನಡೆಸಲಾಗುತ್ತದೆ. ಈ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ತುಳುವರು ದೇವಸ್ಥಾನಕ್ಕೆ ಹೋಗುತ್ತಾರೆ.ಈ ಮೂಲಕ ದೇವಸ್ಥಾನದಲ್ಲಿ ಇಂದು ಕಿಕ್ಕಿರಿದು ಜನಸಂದಣಿ ಇರುತ್ತದೆ. ಕೆಲವರು ಮನೆಯಲ್ಲಿ ಹಬ್ಬದೂಟ ಮಾಡಿ ಸಂಭ್ರಮಿಸಿದರೆ, ಮತ್ತೆ ಕೆಲವರು ದೇವಸ್ಥಾನದಲ್ಲಿ ಪ್ರಸಾದ ಭೋಜನೆ ಸವಿಯುತ್ತಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top