ಸುಳ್ಯ : ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಎ. 14 ರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಈಗಾಗಲೇ ಸುಳ್ಯದಲ್ಲಿ ಜಿ. ಕೃಷ್ಣಪ್ಪ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು, ಇದರಿಂದ ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಅಲ್ಲದೇ ನಂದಕುಮಾರ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಸಿದ್ಧತೆ ಕೂಡ ನಡೆಸಿದ್ದಾರೆ. ಕಾಂಗ್ರೆಸ್ ಬಿಫಾರಂ ನೀಡಬೇಕು ಇಲ್ಲದಿದ್ದರೆ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಏ.15 ರಂದು ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಜಿ.ಕೃಷ್ಣಪ್ಪ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದು 18 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಸುಳ್ಯ ಕಾಂಗ್ರೆಸ್‌ನಲ್ಲಿ ಗೊಂದಲ, ಕಾರ್ಯಕರ್ತರಲ್ಲಿ ಅಸ್ತಿರತೆ ಉಂಟಾಗಿರುವ ಹಿನ್ನಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಸಭೆ ಕರೆದಿದ್ದು ನಂದಕುಮಾರ್, ಜಿ.ಕೃಷ್ಣಪ್ಪ, ಸುಳ್ಯ ಹಾಗು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು ಹಾಗು ನಂದಕುಮಾರ್ ಅಭಿಮಾನಿಗಳಾದ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದಾರೆ. ಸಂಜೆ ಸಭೆ ನಡೆಯಲಿದ್ದು ಕುತೂಹಲ ಮೂಡಿದೆ.