ಉಪ್ಪಿನಂಗಡಿ : ಕರಾವಳಿ ಜಲ್ಲೆಗಳಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ರಣಬಿಸಿಲಿನಿಂದ ಜನತೆ ಹೈರಾಣಾಗಿದ್ದಾರೆ. ನದಿ ಕೆರೆಗಳು ಬತ್ತಿ ಹೋಗುತ್ತಿದ್ದು, ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಈ ಬಾರಿಯ ಬಿಸಿಲಿನ ಬೇಗೆಗೆ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಚಿಲುಮೆಯು ಸಂಪೂರ್ಣ ಬತ್ತಿ ಹೋಗಿದ್ದು, ನೀರಿನ ಅಂಶವೇ ಇಲ್ಲದಂತೆ ಒಣಗಿ ಹೋಗಿದೆ.
ಸರಿ ಸುಮಾರು 36.6 ಡಿಗ್ರಿ ಉಷ್ಣಾಂಶವನ್ನು ಹೊಂದಿದ್ದ ಇಲ್ಲಿನ ಬಿಸಿ ನೀರ ಚಿಲುಮೆಯು ಚರ್ಮರೋಗ ನಿವಾರಕ ಗುಣವನ್ನು ಹೊಂದಿದ್ದು, ಇಲ್ಲಿ ಸ್ನಾನ ಮಾಡುವುದರಿಂದ ಬಹಳಷ್ಟು ಬಗೆಯ ಚರ್ಮ ವ್ಯಾಧಿಗಳು ಗುಣವಾಗುತ್ತಿದ್ದವು. ಬಹಳಷ್ಟು ಮಂದಿ ಇಲ್ಲಿನ ನೀರನ್ನು ಕ್ಯಾನ್‌ಗಳಲ್ಲಿ ತುಂಬಿಸಿ ಕೊಡೊಯ್ಯುತ್ತಿದ್ದರು.
ಸ್ಥಳೀಯ ನಿವಾಸಿ ಮಹಮ್ಮದ್ ಹೇಳುವಂತೆ ಈ ಪರಿಯಲ್ಲಿ ಬತ್ತಿರುವುದು ಇದೇ ಮೊದಲು. 4 ವರ್ಷದ ಹಿಂದೆ ಬತ್ತಿತ್ತಾದರೂ ಕೆರೆಯಲ್ಲಿ ನೀರಿನ ಅಂಶ ಗೋಚರಿಸುತ್ತಿತ್ತು. ಆದರೆ ಈ ಬಾರಿ ಸಂಪೂರ್ಣ ಒಣಗಿ ಹೋದಂತಾಗಿದ್ದು, ನೀರೇ ಇಲ್ಲದ ಸ್ಥಳವೇನೋ ಎಂಬಂತೆ ತೋರುತ್ತಿದೆ. ಸತತ ಬಿಸಿಲ ಝಳದಿಂದ ಪರಿಸರದೆಲ್ಲೆಡೆ ಜಲ ಮೂಲಗಳು ಬತ್ತುತ್ತಿರುವುದರ ಮಧ್ಯೆ ಪ್ರಾಕೃತಿಕ ಸೋಜಿಗವನ್ನು ಮೂಡಿಸಿರುವ ಇಂತಹ ಬಿಸಿ ನೀರ ಚಿಲುಮೆಗಳು ಬತ್ತಲಾರಂಭಿಸಿದ್ದು, ಈ ಬಾರಿಯ ಬೇಸಗೆ ಹೇಗೋ ಎಂಬ ಭೀತಿ ಮೂಡಿದೆ.