ಪುತ್ತೂರು: ಈ ಬಾರಿಯ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳ್ಳುತ್ತಿದ್ದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆಭ್ಯರ್ಥಿ ಆಯ್ಕೆಯಲ್ಲಿ ಅಸಮಾಧಾನ ಉಂಟಾಗಿರುವುದರ ಪರಿಣಾಮ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆ ಸಂಘ ಪರಿವಾರದ ಜಿಲ್ಲೆಯ ಹಿರಿಯ ಮುಖಂಡರು ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಬೆಂಬಲಿಗರ ಜತೆ ಬುಧವಾರ ರಾತ್ರಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಮಟ್ಟದ ನಾಯಕರು, ಬಿಜೆಪಿ ಪರಿವಾರ ಸಂಘಟನೆಯ ಮುಖಂಡರು, ಪಕ್ಷದ ಆಯಕಟ್ಟಿನಲ್ಲಿರುವ ಪದಾಧಿಕಾರಿಗಳ ಜತೆ ಪುತ್ತೂರಿನಲ್ಲಿ ಸಂಘದ ಹಿರಿಯ ಮುಖಂಡರಾದ ಡಾ.ಪ್ರಭಾಕರ ಭಟ್ ಹಾಗೂ ಪ್ರಕಾಶ್ ಪಿ.ಎಸ್. ಅವರ ನೇತೃತ್ವದಲ್ಲಿ ನಡೆದ ಬೈಠಕ್ ನಲ್ಲಿ ಪಕ್ಷದ ಅಭ್ಯರ್ಥಿ ಪರ ಶ್ರಮವಹಿಸಿ ದುಡಿಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಆಜ್ಞಾತ ಸ್ಥಳದಲ್ಲಿ ಪುತ್ತಿಲರ ಜತೆ ಮಾತುಕತೆ ನಡೆಸಿದ್ದು, ಈ ಮಾತುಕತೆ ವಿಫಲಗೊಂಡಿದೆ ಎಂದು ತಿಳಿದು ಬಂದಿದೆ.
ಪುತ್ತೂರಿನಲ್ಲಿ ಈ ಬಾರಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೇಟ್ ನೀಡಬೇಕೆಂದು ಪುತ್ತಿಲ ಅಭಿಮಾನಿಗಳ ಒತ್ತಾಯವಾಗಿತ್ತು. ಆದರೆ ಈ ಆಶಯಕ್ಕೆ ತಣ್ಣಿರೆರಚಿದ ಹೈಕಮಾಂಡ್ ನ ನಿರ್ಧಾರದಿಂದಾಗಿ ಹಿಂದುತ್ವದ ಧ್ವನಿಯನ್ನು ಮುನ್ನಲೆಗೆ ತರಲು, ಕಾರ್ಯಕರ್ತರ ಭಾವನೆಗೆ ಬೆಲೆ ನೀಡುವುದರ ಜತೆಗೆ ಹಿಂದೂಪರ ಕೆಲಸ ನಿರ್ವಹಿಸಲು ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬುಧವಾರ ಸಂಜೆ ಸಾಲ್ಮರ ಕೊಟೇಚಾ ಹಾಲ್‍ನಲ್ಲಿ ನಡೆದ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪುತ್ತಿಲ ಅವರು ಎರಡು ದಿನದಲ್ಲಿ ತನ್ನ ಸ್ಪಷ್ಟ ನಿಲುವನ್ನು ತಿಳಿಸುವ ಕುರಿತು ಸಭೆಯಲ್ಲಿ ಬಹಿರಂಗವಾಗಿ ತಿಳಿಸಿದ್ದರು. ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಸ್ಪರ್ಧೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಮತ್ತು ತಮ್ಮ ನಿರ್ಧಾರವನ್ನು ಇಂದು ಘೋಷಿಸುವುದಾಗಿ ತಿಳಿದು ಬಂದಿದೆ.
ಇದೀಗ ಪುತ್ತಿಲರ ಆಪ್ತ ಮೂಲಗಳ ಪ್ರಕಾರ ಪುತ್ತಿಲರು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು,ಈ ಕುರಿತು ಸಿದ್ಧತೆಯಲ್ಲಿ ಬೆಂಬಲಿಗರು ತೊಡಗಿಸಿಕೊಂಡಿದ್ದಾರೆ.