ಅಂಬಿಕಾ ಮಹಾವಿದ್ಯಾಲಯದಲ್ಲಿ  ಸ್ಮಾರ್ಟ್ ಬೋರ್ಡ್ ಬಳಕೆ ತರಬೇತಿ

ಪುತ್ತೂರು: ಆಧುನಿಕ ಕಾಲಘಟ್ಟದ ಶಿಕ್ಷಣ ವ್ಯವಸ್ಥೆ ಸಾಕಷ್ಟು ಬದಲಾಗಿದೆ. ಇಂಟರ್‍ಯಾಕ್ಟಿವ್ ಸ್ಮಾರ್ಟ್ ಬೋರ್ಡ್ ಈಗ ಪ್ರಚಲಿತಕ್ಕೆ ಬರುತ್ತಿದೆ. ಹಾಗಾಗಿ ಪಾರಂಪರಿಕವಾಗಿದ್ದ ಸುಣ್ಣದ ಕಡ್ಡಿ, ಕರಿಹಲಗೆಯ ಬದಲಾಗಿ ಸ್ಮಾಟ್ ಬೋರ್ಡ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಕರಿಹಲಗೆಯನ್ನಷ್ಟೇ ಅಲ್ಲದೆ ತಮಗೆ ಬೇಕಾದ ಬಣ್ಣದ ಹಿನ್ನೆಲೆ ಹಾಗೂ ಅಕ್ಷರಗಳನ್ನು ರೂಪಿಸಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಸುಮಾರು 1.75 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಅಳವಡಿಸಲಾಗಿರುವ ಸ್ಮಾರ್ಟ್ ಬೋರ್ಡ್ ಅನ್ನು ಬಳಸುವ ಬಗೆಗಿನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಸ್ತುವೊಂದರ ಬಗೆಗೆ ಕೇವಲ ಬಾಯಿಮಾತಿನಲ್ಲಿ ವಿವರಣೆ ನೀಡುವುದಕ್ಕೂ, ಎದುರಿನಲ್ಲೇ ಇರಿಸಿ, ತೋರಿಸಿ ಹೇಳುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಸ್ಮಾಟ್ ಬೋರ್ಡ್ ಸಚಿತ್ರ ಪಾಠ ಮಾಡುವುದಕ್ಕೆ, ಕೆಲವೊಂದು ವಿಷಯಗಳನ್ನು ಎದ್ದು ಕಾಣಿಸುವುದಕ್ಕೆ, ವಿಷಯಕ್ಕೆ ಸಂಬಂಧಿಸಿದಂತೆ ತಕ್ಷಣವೇ ಇಂಟರ್ನೆಟ್‌ನಿಂದ ಮಾಹಿತಿ, ಚಿತ್ರ ಅಥವ ವೀಡಿಯೋ ಪಡೆದು ಪ್ರದರ್ಶಿಸುವುದಕ್ಕೆ ಸಹಕಾರಿಯಾಗುತ್ತದೆ. ಇದು ವಿದ್ಯಾರ್ಥಿಗಳಿಗೂ ಸಾಕಷ್ಟು ಖುಷಿ ನೀಡುತ್ತದೆ ಎಂದರು.































 
 

ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ, ಮುಂದಿನ ಒಂದು ವಾರದಿಂದ ಪ್ರತಿಯೊಬ್ಬ ಉಪನ್ಯಾಸಕರೂ ಸ್ಮಾರ್ಟ್ ಬೋರ್ಡ್ ಬಳಕೆ ಮಾಡುವುದಕ್ಕೆ ಸಿದ್ಧರಾಗಬೇಕಿದೆ. ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಸ್ಮಾರ್ಟ್ ಬೋರ್ಡನ್ನು ಹೇಗೆ ಬಳಸಿಕೊಳ್ಳಬಹುದೆಂಬ ಚಿಂತನೆಯನ್ನು ನಡೆಸಬೇಕಿದೆ. ಸಂಸ್ಥೆಯಲ್ಲಿ ಕೇವಲ ಸ್ಮಾರ್ಟ್ ಬೋರ್ಡ್ ಇದ್ದರೆ ಸಾಲದು, ಅದು ನಿತ್ಯವೂ ವ್ಯಾಪಕ ಬಳಕೆಯನ್ನು ಕಾಣಬೇಕು. ಹಾಗಾದಾಗಲೇ ಆಧುನಿಕ ಶಿಕ್ಷಣ ಪರಿಕರವನ್ನು ಹೊಂದಿರುವುದು ಸಾರ್ಥಕವೆನಿಸುತ್ತದೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ಕಾರ್ಯಕ್ರಮ ಸಮಿತಿ ಸಂಯೋಜಕಿ ಹಾಗೂ ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಗಿರೀಶ ಭಟ್ ಕೂವೆತ್ತಂಡ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ನಂತರ ಸ್ಮಾರ್ಟ್ ಬೋರ್ಡ್ ಬಳಕೆಯ ಬಗೆಗೆ ತರಬೇತಿ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top