ಶಿವಮೊಗ್ಗ: ಹಿರಿಯ ನಾಯಕ ಈಶ್ವರಪ್ಪ ಅವರ ಚುನಾವಣಾ ನಿವೃತ್ತಿಯಿಂದ ಎದ್ದಿರುವ ಬೇಗುದಿಯನ್ನು ಶಮನಗೊಳಿಸಲು ಪಕ್ಷದ ನಾಯಕರು ಹೆಣಗಾಡುತ್ತಿದ್ದಾರೆ. ಶಿವಮೊಗ್ಗದ ಈಶ್ವರಪ್ಪ ಬೆಂಬಲಿಗರು ಮತ್ತು ಅಭಿಮಾನಿಗಳು ನಿವೃತ್ತಿ ಹಿಂದೆ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಡ ಹೇರುತ್ತಿದ್ದು, ಇದೀಗ ನಿವೃತ್ತಿ ವಿರೋಧಿಸಿ ಶಿವಮೊಗ್ಗ ಪಾಲಿಕೆ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ಕೆ.ಎಸ್.ಈಶ್ವರಪ್ಪ ನಿರ್ಧಾರಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂಬ ಒತ್ತಾಯಿಸುತ್ತಿದ್ದಾರೆ. ಮೇಯರ್- ಉಪಮೇಯರ್ ಸೇರಿದಂತೆ ಎಲ್ಲ 19 ಮಂದಿ ಬಿಜೆಪಿ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಅದೇ ರೀತಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸಹ ರಾಜೀನಾಮೆಗೆ ನಿರ್ಧಾರ ಮಾಡಿದ್ದು, ಬೆಂಗಳೂರಿಗೆ ತೆರಳಿ ಯಡಿಯೂರಪ್ಪ ಅವರನ್ನು ಭೇಟಿಯಾಗಲು ನಿರ್ಧಾರಿಸಿದ್ದಾರೆ. ಈಶ್ವರಪ್ಪ ಅಭಿಮಾನಿಗಳು ಬಿಜೆಪಿ ಜಿಲ್ಲಾ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.