ಆಪ್ ನಾಯಕರ ಜತೆಗಿನ ವಾಟ್ಸಾಪ್ ಚಾಟ್ ಬಹಿರಂಗ
ಹೊಸದಿಲ್ಲಿ : ವಂಚಕ ಸುಕೇಶ್ ಚಂದ್ರಶೇಖರ್ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಮತ್ತು ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ಅವರೊಂದಿಗೆ ತಾನು ವ್ಯವಹಾರಗಳಿಗೆ ಸಂಬಂಧಿಸಿ ಮಾಡಿರುವ ವಾಟ್ಸಾಪ್ ಚಾಟ್‌ಗಳನ್ನು ಬಿಡುಗಡೆ ಮಾಡಿ ಸಂಚಲನವುಂಟು ಮಾಡಿದ್ದಾನೆ. ಅವರೊಂದಿಗೆ ತಾನು ನಡೆಸಿರುವ ಸಂಭಾಷಣೆ ಆಮ್ ಆದ್ಮಿ ಪಾರ್ಟಿಯ ಮುಖಂಡ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮದ್ಯ ನೀತಿ ಹಗರಣದಲ್ಲಿ ಆರೋಪಿಯಾಗಿರುವ ಬಿಆರ್‌ಎಸ್ ನಾಯಕರ ನಡುವಿನ ಸಂಬಂಧವನ್ನು ಸೂಚಿಸುತ್ತದೆ ಎಂದು ಸುಕೇಶ್ ಹೇಳಿಕೊಂಡಿದ್ದಾನೆ.
ಮಂಡೋಲಿ ಜೈಲಿನಿಂದ ದಿಲ್ಲಿ ಲೆಫ್ಟಿನೆಂಟ್ ಗರ್ವನರ್ ವಿ.ಕೆ. ಸಕ್ಸೇನಾ ಅವರಿಗೆ ಬರೆದ ಪತ್ರದಲ್ಲಿ, ತನ್ನ ಹಾಗೂ ಆಮ್ ಆದ್ಮಿ ಪಕ್ಷ ಮತ್ತು ಸಿಎಂ ಕೇಜ್ರಿವಾಲ್ ನಡುವೆ ಅನೇಕ ಒಪ್ಪಂದಗಳು, ವ್ಯಾಪಾರ ವಹಿವಾಟುಗಳು ನಡೆದಿವೆ ಎಂದು ಸುಕೇಶ್ ಚಂದ್ರಶೇಖರ್ ಆರೋಪಿಸಿದ್ದಾನೆ.
ಚಾಟ್‌ಗಳ ಪ್ರತಿಯನ್ನು ಲಗತ್ತಿಸಿರುವ ಸುಕೇಶ್, ಮದ್ಯ ಹಗರಣದಲ್ಲಿ ಭಾಗಿಯಾಗಿರುವ ಆಮ್ ಆದ್ಮಿ ಪಾರ್ಟಿ, ಅರವಿಂದ್ ಕೇಜ್ರಿವಾಲ್ ಮತ್ತು ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ನಡುವಿನ ಸಂಬಂಧವನ್ನು ತೋರಿಸುತ್ತದೆ. ಈ ಚಾಟ್ ಮದ್ಯ ಹಗರಣ ಪ್ರಕರಣದ ತನಿಖೆಗೆ ಸಹಾಯ ಮಾಡುತ್ತದೆ. ಈ ಚಾಟ್ ನಾನು ಅರವಿಂದ್ ಕೇಜ್ರಿವಾಲ್ ಮತ್ತು ಸತ್ಯೇಂದ್ರ ಜೈನ್ ಅವರಿಗೆ ನೀಡಿದ 15 ಕೋಟಿ ರೂ.ಗಳಿಗೆ ಸಂಬಂಧಿಸಿದ್ದು, ಹೈದರಾಬಾದ್‌ನ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರಿಗೆ ಹಣ ತಲುಪಿಸಲು ಕೇಳಿಕೊಂಡಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.
ಸುಕೇಶ್ ಕಳುಹಿಸಿದ ಸಂದೇಶವೊಂದರಲ್ಲಿ, “ಎಕೆ ಬ್ರೋಗೆ ಪ್ಯಾಕೇಜ್ ನೀಡಬೇಕಾಗಿದೆ. ಅದು ನನ್ನ ಬಳಿ ಸಿದ್ಧವಾಗಿದೆ” ಎಂದು ಬರೆಯಲಾಗಿದೆ. ಈ ಪ್ಯಾಕೇಜ್ 15 ಕೋಟಿ ರೂಪಾಯಿ ಎಂದು ಚಂದ್ರಶೇಖರ್ ಹೇಳಿಕೊಂಡಿದ್ದಾನೆ.