ಪುತ್ತೂರು : ಬಿಜೆಪಿ ನಿನ್ನೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಪುತ್ತೂರಿನ ಬಿಜೆಪಿ ಟಿಕೆಟ್ ನೀಡಿದೆ. ಇದರ ಬೆನ್ನಲ್ಲೇ ಪುತ್ತೂರು ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಬೆಂಬಲಿಗರ ನೇತೃತ್ವದಲ್ಲಿ ತುರ್ತು ಸಭೆ ನಡೆಯಲಿದೆ.
ಕಳೆದ ಎರಡು ಅವಧಿಯಲ್ಲಿ ಅರುಣ್ ಅವರ ಹೆಸರು ಅಭ್ಯರ್ಥಿ ಸ್ಥಾನಕ್ಕೆ ಕೇಳಿ ಬಂದಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಅವರಿಗೆ ಅವಕಾಶ ನೀಡುವಂತೆ ಸಂಘ ಪರಿವಾರದ ಒಂದು ತಂಡ ತೀವ್ರ ಒತ್ತಡ ಹೇರಿತ್ತು. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೂ ನಡೆದಿತ್ತು. ಪುತ್ತಿಲ ಪರ ಹಲವೆಡೆ ಬ್ಯಾನರ್ ಗಳನ್ನು ಕೂಡ ಹಾಕಲಾಗಿತ್ತು. ಬಿಜೆಪಿಯ ಸರ್ವೇಯಲ್ಲಿ ಅರುಣ್ ಹೆಸರು ಕೂಡ ಇತ್ತು ಎನ್ನಲಾಗಿದ್ದು ಹೀಗಾಗಿ ಈ ಬಾರಿ ಅರುಣ್ ಅವರಿಗೆ ಟಿಕೇಟ್ ಸಿಗುವ ನಿರೀಕ್ಷೆಯನ್ನು ಬೆಂಬಲಿಗರು ಹೊಂದಿದ್ದರು. ಅರುಣ್ ಪುತ್ತಿಲ ಅವರಿಗೆ ಟಿಕೆಟ್ ಸಿಗದ ಕಾರಣ ಅರುಣ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಡ ಹೇರಲಾಗಿದೆ ಎನ್ನಲಾಗಿದೆ.
ರಾಜಕೀಯಕ್ಕೆ ನಿವೃತಿ ಘೋಷಿಸಿ, ಚುನಾವಣಾ ಪ್ರಚಾರಕ್ಕೂ ಹೋಗುವುದಿಲ್ಲವೆಂದ ಸಚಿವ ಅಂಗಾರ
ಸುಳ್ಯ : ಸುಳ್ಯ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಸಚಿವ ಎಸ್.ಅಂಗಾರ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಬೇಸರಗೊಂಡು ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ.
ಟಿಕೆಟ್ ಕೈತಪ್ಪಿದ ಬಗ್ಗೆ ಮಾತನಾಡಿದ ಅಂಗಾರ, ಪಕ್ಷ ಟಿಕೆಟ್ ನೀಡದ ಕುರಿತು ನನ್ನ ಅಸಮಾಧಾನವಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು ಹೇಳಿದ ಅಂಗಾರ, ನಾನು ಇನ್ನು ರಾಜಕಾರಣದಲ್ಲಿಲ್ಲ. ಚುನಾವಣಾ ಪ್ರಚಾರ ಕಣದಲ್ಲೂ ಇಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬೇಕು ಎಂದು ಹೇಳಿದರು.
6 ಬಾರಿ ಶಾಸಕರಾಗಿರುವ ಅಂಗಾರ ಈ ಬಾರಿ ಸಚಿವರಾಗಿ ಅಧಿಕಾರವನ್ನು ಪಡೆದಿದ್ದರು. ಇದೀಗ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ರಾಜಕೀಯಕ್ಕೆ ನಿವೃತಿ ಘೋಷಿಸಿಕೊಂಡಿದ್ದಾರೆ. ಅವರು ಜನವರಿ 2021 ರಿಂದ ಕರ್ನಾಟಕ ರಾಜ್ಯದ ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವರಾಗಿದ್ದರು.