ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಬಂಡಾಯದ ಬಿಸಿ ಹೆಚ್ಚಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಪಕ್ಷ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿ ನಾಯಕರು ಅಸಮಾಧಾನದ ನಡುವೆ ಇದೀಗ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜನಂದಿನಿ ಏ. 11 ರಂದು ಪಕ್ಷ ತೊರೆಯಲು ಮುಂದಾಗಿದ್ದು, ನಗರದ ಮಲ್ಲೇಶ್ವರದ ಬಿಜೆಪಿಯ ರಾಜ್ಯ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ರಾಜನಂದಿನಿ ಬುಧವಾರ ಬಿಜೆಪಿ ಪಕ್ಷ ಸೇರ್ಪಡೆಯಾದರು.
ಇಂದು ಬಿಎಸ್ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಬೇಟಿಯಾದ ರಾಜನಂದನಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ರಾಜನಂದಿನಿಗೆ ಕಾಂಗ್ರೆಸ್ ಟಿಕೆಟ್ ವಂಚಿಸಿತ್ತು. ಇಷ್ಟೇ ಅಲ್ಲ ಕಾಗೋಡು ತಿಮ್ಮಪ್ಪಗೂ ಟಿಕೆಟ್ ನಿರಾಕರಿಸಲಾಗಿತ್ತು. ಸಾಗರದಿಂದ ಕಾಗೋಡು ತಿಮ್ಮಪ್ಪ ಮತ್ತೆ ಸ್ಪರ್ಧಿಸಲು ಸಜ್ಜಾಗಿದ್ದರು. ವಯಸ್ಸಿನ ಕಾರಣದಿಂದ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರೆ ಪುತ್ರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದರು. ಆದರೆ ಕಾಂಗ್ರೆಸ್ ಕಾಗೋಡು ತಿಮ್ಮಪ್ಪ, ಪುತ್ರಿ ರಾಜನಂದಿನಿ ಬದಲು ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ನೀಡಿದ್ದರು. ಇದರಿಂದ ಕಾಗೋಡು ಹಾಗೂ ರಾಜನಂದಿನಿ ತೀವ್ರ ಅಸಮಾಧಾನಗೊಂಡಿದ್ದರು. ಇದೀಗ ಕಾಂಗ್ರೆಸ್ ತಮ್ಮನ್ನು ಕಡೆಗಣಿಸುತ್ತಿದೆ ಅನ್ನೋ ಅಸಮಾಧಾನವನ್ನು ರಾಜನಂದಿನಿ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇಂದು 2 ಗಂಟೆಗೆ ರಾಜನಂದಿನಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ. ಬಳಿಕ ಅಧಿಕೃತವಾಗಿ ಬಿಜೆಪಿ ಸೇರಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲಿ 2ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಬಂಡಾಯದ ಬಾವುಟು ಹೆಚ್ಚಾಗಿದೆ. ಜಿಲ್ಲೆ ಜಿಲ್ಲೆಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ ಗೊಂಡರೆ ಮತ್ತೆ ಕೆಲವರು ಪಕ್ಷೇತರರಾಗಿ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ರಘು ಆಚಾರ್ ಜೆಡಿಎಸ್ ಸೇರಿಕೊಂಡಿದರೆ, ವೈಎಸ್‌ವಿ ದತ್ತ ಪಕ್ಷೇತರರಾಗಿ ಸ್ಪರ್ಧಿಸಲು ಮನಸ್ಸ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಬಂಡಾಯ ಶಮನಕ್ಕಾಗಿ ಮಾತುಕತೆ ನಡೆಸಲಾಗುತ್ತದೆ.
ಮಗಳು ಬಿಜೆಪಿ ಸೇರಲು ಹೊರಟಿರುವುದು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ. ಆಕೆ ಈ ಕೆಲಸ ಮಾಡಬಾರದಿತ್ತು ಎಂದು ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಪುತ್ರಿ ರಾಜನಂದಿನಿ ಬಿಜೆಪಿ ಸೇರಲು ಹೊರಟಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಈ ವಿಚಾರ ನನಗೆ ಗೊತ್ತಿರಲಿಲ್ಲ. ನನಗೆ ಈಗ ವಿಷಯ ಗೊತ್ತಾಯಿತು. ಅವಳು (ರಾಜ ನಂದಿನಿ) ಈ ರೀತಿ ಮಾಡುತ್ತಾಳೆ ಎಂಬುದನ್ನು ಕನಸಲ್ಲೂ ಯೋಚಿಸಿರಲಿಲ್ಲ. ಇದೆಲ್ಲ ಶಾಸಕ ಹರತಾಳು ಹಾಲಪ್ಪ ಅವರ ತಂತ್ರ ಇರಬಹುದು ಎಂದು ಹೇಳಿದ್ದಾರೆ. ರಾಜಕಾರಣದಲ್ಲಿ ಬದ್ಧತೆ, ಸ್ಥಿರತೆ ಇಟ್ಟುಕೊಂಡು ಬೆಳೆದು ಬಂದವರು ನಾವು. ಆ ಸಂತೋಷ, ನೆಮ್ಮದಿ ನನಗೆ ಇದೆ. ಏನೇ ಆಗಲಿ ನಾನು ಕಾಂಗ್ರೆಸ್ ಬಿಟ್ಡು ಹೋಗಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ನಿಲ್ಲುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದರು.