ದೂರವಾದ ಜನರ ಆತಂಕ
ದೆಹಲಿ : ಈ ವರ್ಷ ಮಳೆ ಕೊರತೆಯಾಗಲಿದೆ ಎಂಬ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್‌ನ ಭವಿಷ್ಯವನ್ನು ಸರಕಾರಿ ಹವಾಮಾನ ಸಂಸ್ಥೆ ಅಲ್ಲಗಳೆದಿದೆ. ಶೇ.20 ರಷ್ಟು ಮಳೆ ಕೊರತೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಭವಿಷ್ಯ ನುಡಿದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಭಾರತೀಯ ಹವಾಮಾನ ಇಲಾಖೆ ಈ ಮುಂಗಾರಿನಲ್ಲಿ ‘ಎಲ್ ನಿನೋ’ ಹವಾಮಾನ ಸ್ಥಿತ್ಯಂತರ ಉಂಟಾಗದು. ವಾಡಿಕೆಯಂತೆ ಈ ಸಲವೂ ಸಾಮಾನ್ಯ ಮುಂಗಾರು ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯನ್ನೇ ರೈತಾಪಿ ವರ್ಗ ಬಹುವಾಗಿ ನಂಬುತ್ತದೆ. ಹೀಗಾಗಿ ರೈತರ ಜೀವನಾಡಿ ಎನ್ನಿಸಿಕೊಂಡಿರುವ ಮುಂಗಾರು ಸಾಮಾನ್ಯ ಪ್ರಮಾಣದಲ್ಲಿ ಸುರಿಯುವ ಮುನ್ಸೂಚನೆ ಲಭಿಸಿರುವುದು ಆತಂಕ ದೂರ ಮಾಡಿದೆ.
ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ದೀರ್ಘ ಕಾಲೀನ ಸರಾಸರಿಯ ಶೇ.96 ರಷ್ಟು ಮಳೆ ಸುರಿಯಲಿದೆ. ಇದರಲ್ಲಿ ಶೇ.5 ರಷ್ಟು ಹೆಚ್ಚೂ-ಕಡಿಮೆ ಕೂಡ ಆಗಬಹುದು. ದೇಶಾದ್ಯಂತ ಸರಾಸರಿ 87 ಸೆಂ.ಮೀ. ಮಳೆ ಈ ಸಲ ಸುರಿಯಲಿದೆ ಎಂದು ಭೂವಿಜ್ಞಾನ ಕಾರ್ಯದರ್ಶಿ ಎಂ. ರವಿಚಂದ್ರನ್ ಹೇಳಿದ್ದಾರೆ.
ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಶೇ.67 ರಷ್ಟಿದೆ. ದಕ್ಷಿಣ ಭಾರತ, ಪೂರ್ವ-ಮಧ್ಯ ಭಾರತ, ವಾಯವ್ಯ ಭಾರತ ಹಾಗೂ ಈಶಾನ್ಯ ಭಾರತದ ಹಲವಾರು ಭಾಗಗಳಲ್ಲಿ ವಾಡಿಕೆಯ ಮಳೆ ಬೀಳಲಿದೆ. ಪಶ್ಚಿಮ ಮಧ್ಯ ಭಾರತ, ವಾಯವ್ಯ ಭಾರತ ಹಾಗೂ ಈಶಾನ್ಯ ಭಾರತದ ಕೆಲವೆಡೆ ಮಾತ್ರ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ ಎಂದು ಹೇಳಿದ್ದಾರೆ. .
ಎಲ್ ನಿನೋ ಸ್ಥಿತ್ಯಂತರದ ಪ್ರಭಾವು ಮುಂಗಾರಿನ ಉತ್ತರಾರ್ಧದಲ್ಲಿ ಆಗಬಹುದು. ಎಲ್ ನಿನೋ ಪ್ರಭಾವ ಬೀರಿದ ವರ್ಷಗಳೆಲ್ಲ ಮಳೆ ಕಡಿಮೆಯಾಗಿಲ್ಲ. 1951ರಿಂದ 2022ರವರೆಗಿನ ಎಲ್ ನಿನೋ ವರ್ಷಗಳಲ್ಲಿ ಶೇ.40 ರಷ್ಟು ಸಾಲುಗಳು ವಾಡಿಕೆಗಿಂತ ಅಧಿಕ ಮಳೆಯಾಗಿದೆ.