ನಾಳೆ ಬೆಂಬಲಿಗರೊಂದಿಗೆ ಚರ್ಚಿಸಿ ಕಾಂಗ್ರೆಸ್ ಸೇರ್ಪಡೆಯ ತೀರ್ಮಾನ
ಚಿಕ್ಕೋಡಿ : ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷದಿಂದ ಹೊರನಡೆಯಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗಿದ್ದು, ನಾಳೆ ಬೆಂಬಲಿಗರ ಜತೆ ಚರ್ಚೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳೋದಾಗಿ ಲಕ್ಷ್ಮಣ ಸವದಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಂಜೆ ಅಥಣಿಯಲ್ಲಿ ನಡೆದ ಬಣಜಿಗರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸವದಿ, ಟಿಕೆಟ್ ಕೈತಪ್ಪಿದ್ದಕ್ಕೆ ದು:ಖಿತರಾಗಿ ಕಣ್ಣೀರು ಹಾಕಿದ್ದರು. ಈಗ ಕಾಂಗ್ರೆಸ್ ನಾಯಕ ರಾಜು ಕಾಗೆ ಅವರನ್ನು ಭೇಟಿ ಮಾಡಿದ್ದು, ಈ ಮೂಲಕ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಪುಷ್ಟಿ ಸಿಕ್ಕಿದೆ.
ಬಿಜೆಪಿಯಿಂದ ಅಥಣಿ ವಿಧಾನಸಭಾ ಕ್ಷೇತ್ರದಿಂದ ಮಹೇಶ ಕುಮಠಳ್ಳಿ ಅವರನ್ನು ಕಣಕ್ಕಿಳಿಸುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಮುಂದಿನ ನಡೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಏಪ್ರಿಲ್ 13 ರಂದು ನನ್ನ ಬೆಂಬಲಿಗರು ಮತ್ತು ಅಥಣಿ ಜನತೆಯನ್ನು ಭೇಟಿ ಮಾಡಿ ಮುಂದಿನ ನಡೆ ಬಗ್ಗೆ ನಿರ್ಧರಿಸುತ್ತೇನೆ, ಜನರು ಬಯಸಿದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದ ಅವರು, ತಮ್ಮ ಬೆಂಬಲಿಗರ ಇಚ್ಛೆಯಿದ್ದಲ್ಲಿ ಅಥಣಿಯಿಂದ ಪಕ್ಷೇತರರಾಗಿ ಸ್ಪರ್ಧಿಸಲು ಸಿದ್ಧ ಎಂದು ಬಾಂಬ್ ಹಾಕಿದ್ದಾರೆ.