ಬಿಜೆಪಿ ಚುನಾವಣಾ ಪ್ರಚಾರದ ನಾಟು…. ನಾಟು…. ಹಾಡು ವೈರಲ್

ಬೆಂಗಳೂರು : ಇನ್ನೊಂದು ತಿಂಗಳು ಬಾಕಿ ಇರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ರಣತಂತ್ರಗಳನ್ನು ರೂಪಿಸುತ್ತಿದ್ದು, ಮತದಾರರ ಒಲೈಕೆಗಾಗಿ ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಆಡಳಿತಾರೂಢ ಬಿಜೆಪಿ ಇವತ್ತು ತಮ್ಮ ಚುನಾವಣಾ ಪ್ರಚಾರದ ಹಾಡನ್ನು ಬಿಡುಗಡೆ ಮಾಡಿದೆ. ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಲಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿನ ಆಸ್ಕರ್ ವಿಜೇತ ಹಾಡು ನಾಟು ನಾಟು ಹಾಡನ್ನು ರಿಮಿಕ್ಸ್ ಮಾಡಿ ಇವತ್ತು (ಏ.11) ಬಿಡುಗಡೆ ಮಾಡಿದೆ.

ಈ ಹಾಡಿನಲ್ಲಿ ನಾಟು ನಾಟು ಬದಲಾಗಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಕಾರ್ಯಕ್ರಮಗಳನ್ನು ಹಾಡಿನಲ್ಲಿ ಹೇಳಲಾಗಿದೆ. ಚುನಾವಣಾ ಪ್ರಚಾರದ ಈ ಹಾಡಿನಲ್ಲಿ ಮೂಲ ನಾಟು ನಾಟು ಸಾಹಿತ್ಯದ ಬದಲಾಗಿ ಎಲ್ಲರೂ ಸೇರಿ ಹಾಡಿ ಮೋದಿ ಮೋದಿ ಎಂದು ಬದಲಾಯಿಸಲಾಗಿದೆ. ಯುವಕರು ಈ ಹಾಡಿಗೆ ನೃತ್ಯ ಮಾಡಿದ್ದು, ಮೂಲ ವಿಡಿಯೋದಲ್ಲಿರುವ ‘ನಾಟು ನಾಟು’ ಹಾಡಿಗೆ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ರೀತಿಯಲ್ಲಿ ಯುವಕರು ನೃತ್ಯ ಮಾಡಿದ್ದಾರೆ.

ಮೂಲ ಹಾಡನ್ನು ಬದಲಾವಣೆ ಮಾಡಿರುವ ಈ ಹಾಡಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಮೆಟ್ರೋ ಮಾರ್ಗಗಳು ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ.
ಸದ್ಯ ಈ ಹಾಡು ವೈರಲ್ ಆಗುತ್ತಿದ್ದು, ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಟ್ವಿಟರ್ ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ಡಬಲ್ ಎಂಜಿನ್ ಕರ್ನಾಟಕ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಪರ್ವವನ್ನು ಅದ್ಭುತವಾದ ಹಾಡಿನ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ @BJYM ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ.



































 
 

ಆದರೆ ಸಚಿವ ಸುಧಾಕರ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಾಡನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಡಿಲೀಟ್ ಮಾಡಿದ್ದಾರೆ. ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಅಂದಹಾಗೆ ಆರ್ ಆರ್ ಆರ್ ಸಿನಿಮಾಗೆ ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ ವಿ.ವಿಜಯೇಂದ್ರ ಪ್ರಸಾದ್ ಅವರು ಚಿತ್ರಕತೆ ಬರೆದಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಇವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.

ರಾಜಕೀಯ ಪಕ್ಷವೊಂದು ಆಸ್ಕರ್ ಪ್ರಶಸ್ತಿ ವಿಜೇತ ಹಾಡನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿರುವುದು ಇದೇ ಮೊದಲಲ್ಲ. 2009 ರಲ್ಲಿ ಸ್ಲಮ್ ಡಾಗ್ ಮಿಲಿಯನೇರ್‌ನ ‘ಜೈ ಹೋ’ ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದಾಗ, ಕಾಂಗ್ರೆಸ್ ಪಕ್ಷವೂ ಸಹ ಈ ಹಾಡನ್ನು ‘ಜೈ ಹೋ ಕಾಂಗ್ರೆಸ್’ ಎಂದು ರೀಮಿಕ್ಸ್ ಮಾಡಿತ್ತು. ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ತಮ್ಮ ಚುನಾವಣಾ ಪ್ರಚಾರದ ಹಾಡು ಅಂತ ಹೇಳಿ ಬಳಸಿಕೊಂಡಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top