ಪುತ್ತೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಜ್ವರ ಶುರುವಾಗಿದ್ದು, ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಯೋಚನೆಯಡಿ ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ನಡೆಯಬೇಕಿತ್ತು. ಆದರೆ ಕಾರ್ಯಕರ್ತರ ಧ್ವನಿಯ ವಿರುದ್ಧವಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೊರಟಿರುವುದು ವಿಷಾಧನೀಯ ಎಂದು ಹಿಂದೂ ಮುಖಂಡ, ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಟಿಕೇಟ್ ವಂಚಿತರಾದ ಹಿನ್ನಲೆಯಲ್ಲಿ ಬುಧವಾರ ಸಂಜೆ ಸಾಲ್ಮರ ಕೊಟೇಚಾ ಹಾಲ್ ನಲ್ಲಿ ನಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದೂ ಧರ್ಮದ ರಕ್ಷಣೆಗಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುವವರು, ಹಿಂದೂಗಳ ಮೇಲಿನ ಕೇಸುಗಳನ್ನು ತೆಗೆಯುವ, ಮತಾಂತರ, ಲೌವ್ ಜಿಹಾದಿ, ಗೋವಧೆ ಮುಂತಾದವುಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುವ, ಕಾರ್ಯಕರ್ತರನ್ನು ತುಳಿಯದ ಅಭ್ಯರ್ಥಿ ಪುತ್ತೂರು ವಿಧಾನಸಭಾ ಅಭ್ಯರ್ಥಿಯಾಗಿರಬೇಕು ಎಂಬ ನಿಟ್ಟಿನಲ್ಲಿ ಹಿಂದೂ ಕಾರ್ಯಕರ್ತರ ಆಕಾಂಕ್ಷೆ ಮೇರೆಗೆ ನಾನು ಈ ಬಾರಿ ಟಿಕೇಟ್ ಆಕಾಂಕ್ಷಿ ಆಗಿದ್ದೆ ಹೊರತು ಬೇರೆ ಯಾವುದೇ ದುರುದ್ದೇಶಕ್ಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಮುಂದಿ ಎರಡು ದಿನಗಳಲ್ಲಿ ನಮ್ಮ ಯೋಚನೆಯನ್ನು ತಿಳಿಸಲಿದ್ದೇವೆ ಎಂದರು. ಸಾಕಾರಗೊಳ್ಳಲಿದೆ ಎಂದು ಅವರು ತಿಳಿಸಿದರು.
ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ಸಮಾಜದಲ್ಲಿ ಅನೇಕ ಹೋರಾಟಗಳನ್ನು ಮಾಡಿ ಹಿಂದುತ್ವದ ಶಕ್ತಿ ಏನು ಎಂಬುದನ್ನು ಯೋಚನೆ ಮಾಡಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಅರುಣ್ ಕುಮಾರ್ ಪುತ್ತಿಲರ ಜತೆ ನಾವಿದ್ದೇವೆ. ಈ ಮೂಲಕ ಹಿಂದುತ್ವ ಏನು ಎಂಬುದನ್ನು ತೋರಿಸಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಹಿಂದೂ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ನವೀನ್ ರೈ ಕಾರ್ಯಕ್ರಮ ನಿರೂಪಿಸಿದರು.