ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲು ಇನ್ನೂ ವಿಳಂಬ ಮಾಡುತ್ತಿರುವ ಬಿಜೆಪಿ ವರಿಷ್ಠರ ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಸ್ಫೋಟಗೊಂಡಿದೆ. ತಾವಿರುವ ಹುದ್ದೆಗೆ ರಾಜೀನಾಮೆ ನೀಡಿ, ತಾವು ಫೀಲ್ಡಿಗೆ ಹೋಗುವುದೇ ಇಲ್ಲ ಎಂಬ ಅಸಮಾಧಾನವನ್ನು ಹೊರಹಾಕಿರುವ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.
ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ ಭಾಗದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಜೀವ ಮಠಂದೂರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸಂಜೀವ ಮಠಂದೂರು ಅವರನ್ನು ಮತ್ತೊಮ್ಮೆ ಶಾಸಕ ಅಭ್ಯರ್ಥಿಯಾಗಿ ಘೋಷಿಸಬೇಕು. ಅವರನ್ನು ಶಾಸಕ ಸ್ಥಾನದಿಂದ ವಂಚಿತರನ್ನಾಗಿ ಮಾಡಲು ಯಾವುದೇ ಕಾರಣಗಳಿಲ್ಲ. ಅಭಿವೃದ್ಧಿ ವಿಚಾರದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಇವರನ್ನು ಬಿಟ್ಟು ಹೊಸ ಮುಖಗಳನ್ನು ಹುಡುಕಲು ಹೊರಟಿರುವ ಬಿಜೆಪಿ ವರಿಷ್ಠರ ಕ್ರಮ ಸರಿಯಲ್ಲ. ಹಾಗೊಂದು ವೇಳೆ ಸಂಜೀವ ಮಠಂದೂರು ಅವರಿಗೆ ಶಾಸಕ ಸ್ಥಾನ ವಂಚಿತರನ್ನಾಗಿ ಮಾಡಿದರೆ, ಈ ಬಾರಿಯ ಚುನಾವಣೆಯಲ್ಲಿ ಪ್ರಚಾರ ಕಾರ್ಯಕ್ಕೆ ಇಳಿಯುವುದಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಂಜೀವ ಮಠಂದೂರು ಅವರು ಶಾಸಕ ಅಭ್ಯರ್ಥಿಯಾದರೆ ಗೆಲ್ಲುವುದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ. ಅವರು ಕ್ಷೇತ್ರಾದ್ಯಂತ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರ ಗೆಲುವಿಗೆ ಕಾರಣವಾಗಲಿದೆ. ಮಾತ್ರವಲ್ಲ, ಸಂಜೀವ ಮಠಂದೂರು ಅವರು ಎಲ್ಲಾ ವರ್ಗದ ಜನರನ್ನು ಜೊತೆಗೆ ಕೊಂಡೊಯ್ದವರು. ಎಲ್ಲಿಯೂ ತಾರತಮ್ಯ ಮಾಡದೇ, ಎಲ್ಲರೊಂದಿಗೂ ಬೆರೆತವರು. ಅಭಿವೃದ್ಧಿ ಕಾರ್ಯಗಳನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಿದವರು. ಆದ್ದರಿಂದ ಅವರಿಗೆ ಟಿಕೇಟ್ ನಿರಾಕರಣೆ ಮಾಡುವುದರಲ್ಲಿ ಅರ್ಥವೇ ಇಲ್ಲ ಎಂದು ತಿಳಿಸಿದ್ದಾರೆ.
ತಟಸ್ಥ ಧೋರಣೆಯ ಎಚ್ಚರಿಕೆ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯಕರ್ತರೊಬ್ಬರು, ಸಂಜೀವ ಮಠಂದೂರು ಅವರನ್ನು ಹೊರತುಪಡಿಸಿ ಯಾರನ್ನೇ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೂ, ಗೆಲುವು ಕಷ್ಟ ಆಗಲಿದೆ. ಈ ವಿಚಾರವನ್ನು ಮುಖಂಡರ ಗಮನಕ್ಕೂ ತಂದಿದ್ದೇವೆ. ಸಂಜೀವ ಮಠಂದೂರು ಅವರ ಅವಧಿಯಲ್ಲಿ ಆದಂತಹ ಅಭಿವೃದ್ಧಿ ಕಾರ್ಯಗಳು ಈ ಹಿಂದೆ ಎಂದೂ ಆಗಿಲ್ಲ. ಕೋವಿಡ್ ಕಾಲಘಟ್ಟ ಸೇರಿದಂತೆ ಮಠಂದೂರು ಅವಧಿಯಲ್ಲಿ 1200 ಕೋಟಿ ರೂ.ಗೂ ಅಧಿಕ ಅನುದಾನ ತಂದಿದ್ದಾರೆ. ಆದ್ದರಿಂದ ಸಂಜೀವ ಮಠಂದೂರು ಅವರು ಸುಲಭವಾಗಿ ಗೆಲುವು ಪಡೆದುಕೊಳ್ಳಲಿದ್ದಾರೆ. ಒಂದು ವೇಳೆ ಮಠಂದೂರು ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡದೇ ಇದ್ದರೆ, ಚುನಾವಣೆಯಲ್ಲಿ ನಾವು ತಟಸ್ಥರಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.