ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗರ ಗೌಡ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಕ್ಷೇತ್ರದಲ್ಲಿ ಶಾಸಕರಾಗಿರುವ ಸಂಜೀವ ಮಠಂದೂರು ಅವರು ಸಮರ್ಥ ನಾಯಕರು. ಆದರೆ ಅವರಿಗೆ ಟಿಕೇಟ್ ನಿರಾಕರಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಟಿಕೇಟ್ ನಿರಾಕರಿಸಲು ಕಾರಣವೇನು? ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 2 ಸ್ಥಾನಗಳಲ್ಲಾದರೂ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗಳನ್ನು ಪರಿಗಣಿಸಲೇಬೇಕು. ಅದರಲ್ಲೂ ಪುತ್ತೂರಿನಲ್ಲಿ ಗೌಡ ಸಮುದಾಯದ ಅಭ್ಯರ್ಥಿಯನ್ನೇ ಶಾಸಕ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷ ಮನ್ನಣೆ ನೀಡಬೇಕು. ಒಕ್ಕಲಿಗ ಗೌಡ ಸಮುದಾಯದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಅಂತಹ ಉತ್ತಮ ನಾಯಕರಿದ್ದಾರೆ. ಇಂತಹ ಗೆಲ್ಲುವ ಅಭ್ಯರ್ಥಿಗಳನ್ನೇ ಚುನಾವಣಾ ಅಭ್ಯರ್ಥಿಯಾಗಿ ಗೆಲ್ಲಿಸಬೇಕು ಎಂದು ಒತ್ತಾಯಿಸಿದರು.
ಅವಕಾಶ ಸಿಗದಿದ್ದರೆ ಸೂಕ್ತ ತೀರ್ಮಾನ:
ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಸುಮಾರು 3.75 ಲಕ್ಷ. ಇದರಲ್ಲಿ ಒಕ್ಕಲಿಗ ಗೌಡ ಸಮುದಾಯದ ಮತದಾರರ ಸಂಖ್ಯೆಯೇ ದೊಡ್ಡ ಪ್ರಮಾಣದಲ್ಲಿದೆ. ಆದ್ದರಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಾದರೂ ಗೌಡ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದ್ದೇವು. ಒಂದು ವೇಳೆ ಸಿಗದೇ ಹೋದರೆ, ಜಿಲ್ಲೆಯ ಎಲ್ಲಾ ಒಕ್ಕಲಿಗ ಗೌಡ ಸಮುದಾಯ ಒಂದಾಗಿ, ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ:
ಇತ್ತೀಚಿನ ವರದಿಗಳನ್ನು ಗಮನಿಸಿದಾಗ, ಜಿಲ್ಲೆಯಲ್ಲಿ ಯಾವೊಬ್ಬ ಒಕ್ಕಲಿಗ ಗೌಡ ಸಮುದಾಯದ ನಾಯಕರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿಲ್ಲ. ಇದು ನಿಜವೇ ಆದಲ್ಲಿ, 2023 ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಒಕ್ಕಲಿಗ ಗೌಡ ಸೇವಾ ಸಂಘದ ನಿರ್ದೇಶಕ ಪದ್ಮನಾಭ ಗೌಡ, ಗುರುದೇವ್ ಯು.ಬಿ. ಉಪಸ್ಥಿತರಿದ್ದರು.