ಅಕ್ರಮ ಎಸಗಿದ ಎಸ್‌ಐ ಅಭ್ಯರ್ಥಿಗಳ ಪಟ್ಟಿ ನೀಡಿ : ಹೈಕೋರ್ಟ್‌

ಬೆಂಗಳೂರು : ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಮತ್ತು ಲಿಖಿತ ಪರೀಕ್ಷೆ ರದ್ದುಪಡಿಸಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ 145 ಮಂದಿ ಅಭ್ಯರ್ಥಿಗಳ ಪೈಕಿ ಯಾರೆಲ್ಲಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಜೂ.15ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯ ಸರ್ಕಾರದ ಆದೇಶ ರದ್ದು ಕೋರಿ ಎನ್‌.ವಿ. ಚಂದನ್‌, ವಸಂತ್‌ ನಾಯಕ್‌, ಆಶಾ ಸಣಕಲ್ಲ ಮತ್ತು ರಾಜೇಶ್ವರಿ ಸೇರಿದಂತೆ 145 ಮಂದಿ ಅಭ್ಯರ್ಥಿಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಒಟ್ಟು ಆರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್‌ ಅವರ ನೇತೃತ್ವದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಅರ್ಜಿದಾರರು ಮುಗ್ಧರಾಗಿದ್ದಾರೆ. ಹಗರಣದಲ್ಲಿ ಅವರ ಪಾತ್ರವಿಲ್ಲ. ಹಾಗಾಗಿ, ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಅರ್ಜಿದಾರರಿಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಹಗರಣದಲ್ಲಿ ಎರಡು ಬಗೆಯಿದೆ. ಬ್ಲೂಟೂತ್‌ ಬಳಕೆ ಮಾಡಿ ಹೊರಗಿನಿಂದ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಟ್ಟಿರುವುದು ಒಂದು ಬಗೆ. ನೇಮಕಾತಿ ವಿಭಾಗದಲ್ಲೇ ಓಎಂಆರ್‌ ಶೀಟ್‌ಗಳನ್ನು ತಿದ್ದಿರುವುದು ಇನ್ನೊಂದು ಭಾಗವಾಗಿದೆ. ಓಎಂಆರ್‌ ಶೀಟು ತಿರುಚಿರುವುದರ ಕುರಿತು ಎಫ್‌ಎಸ್‌ಎಲ್‌ ವರದಿ ಬಂದಿದೆ. ಅದರಲ್ಲೇನೂ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಕಳೆದ ವರ್ಷದ ಏಪ್ರಿಲ್‌ನಲ್ಲಿ ಹಗರಣ ಬೆಳಕಿಗೆ ಬಂದಿದೆ. ಒಟ್ಟು 53 ಮಂದಿ ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. 110 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ 29 ಮಂದಿ ಓಎಂಆರ್‌ ತಿರುಚಿದ ಆರೋಪಿಗಳಾಗಿದ್ದಾರೆ. ಹಗರಣದ ಕಿಂಗ್‌ಪಿನ್‌ ಆದ ಆರ್‌.ಡಿ. ಪಾಟೀಲ್‌ ಎಂಬಾತ ನೀರಾವರಿ, ಕೆಪಿಎಸ್‌ಸಿ, ಬೆಸ್ಕಾಂ ಪರೀಕ್ಷೆಗಳಲ್ಲಿ ಈ ತರದ ಕೃತ್ಯ ನಡೆಸಿದ್ದಾನೆ ಎನ್ನುವುದು ತಿಳಿದು ಬಂದಿದೆ. ತನಿಖೆಯನ್ನು ಗಂಭೀರವಾಗಿ ನಡೆಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.



































 
 

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಲಾಗದು, ಕೆಲವರು ಪ್ರಮಾದ ಎಸಗಿರಬಹುದು. ಅಮಾಯಕರ ದೃಷ್ಟಿಯಿಂದಲೂ ನ್ಯಾಯಾಲಯ ಪರಿಶೀಲಿಸಬೇಕಿದೆ. ಅರ್ಜಿದಾರರ ವಿರುದ್ಧವೂ ಬೇಕಾದರೆ ಪ್ರಾಥಮಿಕ ತನಿಖೆ ನಡೆಸಿ. ಆದರೆ, ಆ ಕುರಿತು ಕೋರ್ಟ್‌ ಆದೇಶ ಮಾಡುವುದಿಲ್ಲ. ಪ್ರಕರಣದ ವಿಚಾರಣೆಯನ್ನು ಜೂನ್‌ ಎರಡನೇ ವಾರಕ್ಕೆ ನಿಗದಿ ಮಾಡುತ್ತದೆ. ಈ ವೇಳೆಗೆ ಏನು ಬೆಳವಣಿಗೆ ಆಗಿರುತ್ತದೆ ಎಂಬುದನ್ನು ನೋಡೋಣ. ಈ ಸಂದರ್ಭದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ ಎಂದಾದರೆ ನ್ಯಾಯಾಲಯ ಸೂಕ್ತ ಆದೇಶ ಮಾಡಲಿದೆ. ತನಿಖಾಧಿಕಾರಿಗಳಿಗೆ ಒಂದು ಅವಕಾಶ ನೀಡೋಣ ಎಂದು ತಿಳಿಸಿತಲ್ಲದೆ, ತನಿಖಾ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top