ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ

ಪ್ರಯೋಗ ಖಚಿತ-ಬಂಡಾಯ ತಪ್ಪಿಸಲು ತಂತ್ರಗಾರಿಕೆ

ದೆಹಲಿ : ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗಿದೆ. ಸೋಮವಾರವೇ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಮತ್ತು 170 ರಿಂದ 180 ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ದಿಲ್ಲಿಯಲ್ಲಿ ಸುದ್ದಿಗಾರರಿಗೆ ಇಂದು (ಸೋಮವಾರ) ರಾತ್ರಿಯೊಳಗೆ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು.
ಆದರೆ ನಿರೀಕ್ಷೆಯಂತೆ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಅರುಣಾಚಲ ಪ್ರದೇಶ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದಿಲ್ಲಿಗೆ ಮರಳುವುದು ವಿಳಂಬವಾದ ಕಾರಣ ಪಟ್ಟಿ ಬಿಡುಗಡೆಯಾಗಲಿಲ್ಲ ಎಂದು ಕಾರಣ ಹೇಳಲಾಗಿದೆ. ಆದರೆ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಒಮ್ಮತ ಮೂಡದೆ ವಿಷಯ ಜಟಿಲವಾಗಿರುವುದರಿಂದ ಪಟ್ಟಿ ಬಿಡುಗಡೆ ವಿಳಂಬವಾಗುತ್ತದೆ ಎನ್ನಲಾಗುತ್ತಿದೆ.
ಈ ಸಲ ಬಿಜೆಪಿ ಹಲವು ಪ್ರಯೋಗಗಳನ್ನು ಮಾಡಲಿದೆ. ಹಲವು ಹಾಲಿ ಶಾಸಕರು ಮತ್ತು ಸಚಿವರು ಟಿಕೆಟ್‌ ವಂಚಿತರಾಗಲಿದ್ದಾರೆ. ಇಂತಹ ಸಂದರ್ಭದಲ್ಲಿ ಬಂಡಾಯ ಏಳುವುದು ಸಹಜ. ಬಂಡಾಯ ಏಳುವವರಿಗೆ ನಿರ್ಧಾರ ಕೈಗೊಳ್ಳಲು ಹೆಚ್ಚು ಸಮಯ ಸಿಗಬಾರದು ಎಂಬ ಕಾರಣಕ್ಕೆ ಬಿಜೆಪಿ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಪಕ್ಷದ ಆಂತರಿಕ ಮೂಲವೊಂದು ತಿಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಇಂದು ಕೂಡ ಬಿಜೆಪಿ ಪಟ್ಟಿ ಬಿಡುಗಡೆಯಾಗುವುದು ಅನುಮಾನ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರೇ ಇಂದು ಬೆಳಗ್ಗೆ ಔಪಚಾರಿಕವಾಗಿ ಮಾತನಾಡುತ್ತಾ ಪಟ್ಟಿ ವಿಳಂಬವಾಗುವ ಸುಳಿವು ನೀಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ನಾವು ಸುದೀರ್ಘ ಸಭೆ ಮಾಡಿದ್ದೇವೆ. ಅತ್ಯಗತ್ಯ ಅಂಶಗಳನ್ನು ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ ಸಭೆಯಲ್ಲೂ ಸಹ ಭಾಗಿಯಾಗಿದ್ದಾರೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್ ಅವರು ಸಹ ಭೇಟಿಯಾಗಿ ಟಿಕೆಟ್ ವಿಚಾರದಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯ ನೀಡಿದ್ದಾರೆ. ನಾವು ಸುದೀರ್ಘವಾದ ಚರ್ಚೆ ಮಾಡಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.































 
 

ಇಂದು (ಮಂಗಳವಾರ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದ ಮೇಲೆ ತಡ ರಾತ್ರಿ ಅಥವಾ ಬುಧವಾರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಹಾಲಿ ಶಾಸಕರಿಗೆ ಕೊಕ್ ನೀಡಲಾಗುತ್ತದೆ ಅನ್ನುವುದು ಉಹಾಪೋಹ. ಬಿಜೆಪಿಯಲ್ಲಿ ಕೆಲವು ಮಾನದಂಡಗಳಿವೆ. ಅದೇ ಪ್ರಕಾರ ನಾವು ಕೆಲಸ ಮಾಡುತ್ತೇವೆ. ನಮ್ಮಲ್ಲಿ ಕೆಲವು ವಿಷಯಗಳ ಬಗ್ಗೆ ಸ್ಪಷ್ಟತೆ ಇದೆ. ಅದರ ರೀತಿಯಲ್ಲೇ ಟಿಕೆಟ್ ಅಂತಿಮ ಆಗುತ್ತದೆ. ಎಲ್ಲ ಮಾನದಂಡದ ಬಗ್ಗೆ ಚರ್ಚೆ ಆಗಿದೆ ಎಂದು ಹೇಳಿದ್ದಾರೆ.
170 ರಿಂದ 180 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಸಿದ್ದಗೊಂಡಿದೆ. ಕೆಲ ಅಭ್ಯರ್ಥಿಗಳ ಬಗ್ಗೆ ಹೆಚ್ಚಿನ ಗ್ರೌಂಡ್ ರಿಪೋರ್ಟ್ ನಡೆಸಿ ಅದರ ಆಧಾರದಡಿ ಚರ್ಚಿಸಬೇಕಾಗಿದೆ. ಮುಖ್ಯವಾಗಿ ಇಲ್ಲಿ ಹೊಸ ಅಭ್ಯರ್ಥಿಗಳ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕಳೆದ ಒಂದು ವಾರದಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಬಿಜೆಪಿ ನಾಯಕರು ಒಂದಲ್ಲ ಒಂದು ಕಾರಣದಿಂದ ಮುಂದೂಡುತ್ತಾ ಬಂದಿದ್ದಾರೆ. ಮುಂದಿನ 48ಗಂಟೆಯಲ್ಲಿ ಬಿಜೆಪಿ ಟಿಕೆಟ್ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top