ಉಪ್ಪಿನಂಗಡಿ : ಸಮೀಪದ ಪೆರ್ನೆಯಲ್ಲಿ 2013 ಎಪ್ರಿಲ್ 9ರಂದು ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿ ಅನಿಲ ಸೋರಿಕೆಯೊಂದಿಗೆ ಅಗ್ನಿ ಅನಾಹುತ ಸಂಭವಿಸಿದ ಭೀಕರ ಘಟನೆಯಿಂದ ಹಲವು ಕುಟುಂಬಗಳಿಗೆ ಸೇರಿದ 13 ಮಂದಿ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡ ಘಟನೆಗೆ 10 ವರ್ಷ ಸಂದರೂ ಅದರ ಕಹಿ ನೆನಪು ಇನ್ನೂ ಅಚ್ಚಳಿಯದೆ ಉಳಿದಿದೆ.
ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಪೆರ್ನೆ ತಿರುವಿನಲ್ಲಿ ಮಗುಚಿ ಬಿದ್ದಿದ್ದು, ಅನಿಲ ಸೋರಿಕೆ ಆರಂಭವಾಗಿ ಅಗ್ನಿ ಸ್ಪರ್ಶವಾಗಿತ್ತು. ಧಗಧಗಿಸಲಾರಂಭಿಸಿದ ಬೆಂಕಿಯ ಕೆನ್ನಾಲಗೆ ಪರಿಸರದಾದ್ಯಂತ ವ್ಯಾಪಿಸಿ, ಮನೆ ಅಂಗಡಿಯೊಳಗಿದ್ದ ಜನರೆಲ್ಲಾ ಬೆಂಕಿಗೆ ಸಿಲುಕಿದರು. ಮಹಿಳೆ, ಮಕ್ಕಳನ್ನು ಒಳಗೊಂಡಂತೆ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಾಳುಗಳ ಪೈಕಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಘಟನೆಯಲ್ಲಿ ಸಿಲುಕಿ ಮೈಯಲ್ಲಿದ್ದ ಬಟ್ಟೆ ಬರೆಯೆಲ್ಲಾ ಸುಟ್ಟು, ಮೈ ಚರ್ಮ ಸುಟ್ಟು ಜೀವ ಉಳಿಸಲು ಯುವಕನೋರ್ವ ಹೆದ್ದಾರಿಯಲ್ಲಿ ಓಡೋಡಿ ಬರುತ್ತಿರುವ ಹೃದಯ ವಿದ್ರಾವಕ ಘಟನೆಯು ವೀಡಿಯೋ ಚಿತ್ರೀಕರಣದಲ್ಲಿ ಸೆರೆಯಾಗಿದ್ದು, ಮನ ಕಲಕುವಂತಿತ್ತು.
ಗ್ರಾಮದ ದೈವವೊಂದರ ಆರಾಧನೆ ನಿಂತಿರುವುದರಿಂದ ಸ್ವಲ್ಪ ಸಮಯದಲ್ಲೇ ಗ್ರಾಮದಲ್ಲಿ ಭೀಕರ ಅನಾಹುತವೊಂದು ಸಂಭವಿಸಲಿದೆ ಎಂದು ಪ್ರಶ್ನಾ ಚಿಂತನೆಯಲ್ಲಿ ವ್ಯಕ್ತಗೊಂಡ ಎಚ್ಚರಿಕೆಯ ಬೆನ್ನಲ್ಲೇ ಈ ಅವಘಡ ಸಂಭವಿಸಿತ್ತು.