ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಮುಲ್ ಗೆ ವಿರೋಧ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್

ಹಾಸನ : ಕನ್ನಡಿಗರ ಅಸ್ಮಿತೆಯಾದ ನಂದಿನಿ ಹಾಲು ಮತ್ತು ನಂದಿನಿ ಹಾಲಿನ ಉತ್ಪನ್ನಗಳನ್ನು ಬದಿಗೆ ತಳ್ಳಿ ಗುಜರಾತ್ ಮೂಲದ ಅಮುಲ್ ಹಾಲು ಕರ್ನಾಟಕದಲ್ಲಿ ಪಾರುಪತ್ಯ ಸ್ಥಾಪಿಸಲು ನೋಡುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರ ಸಹಕಾರ ನೀಡುತ್ತಿದೆ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಾಯಕರು ಹಾಗೂ ಜನಸಾಮಾನ್ಯರ ಒಂದು ವರ್ಗ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ.

ನಂದಿನಿ ವರ್ಸಸ್ ಅಮುಲ್ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಜಟಾಪಟಿ ನಡೆಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಸಚಿವರುಗಳು ಸ್ಪಷ್ಟನೆ ನೀಡಿದರೂ ವಿರೋಧ ಪಕ್ಷದ ನಾಯಕರು ಕೇಳುವ ಸ್ಥಿತಿಯಲ್ಲಿಲ್ಲ. ಇಂದು ಹಾಸನದ ನಂದಿನಿ ಹಾಲು ಮತ್ತು ಉತ್ಪನ್ನಗಳ ಮಾರಾಟ ಕೇಂದ್ರವೊಂದಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಿ ಅಮುಲ್ ಗೆ ವಿರೋಧ ವ್ಯಕ್ತಪಡಿಸಿದರು.

ನಂದಿನಿ ಅಳಿವು-ಉಳಿವಿನ ಪ್ರಶ್ನೆ
ಡಿಕೆ ಶಿವಮಕುಮಾರ್​ ಹಾಲು, ತುಪ್ಪ, ಮಜ್ಜಿಗೆ, ಮೈಸೂರು ಪಾಕ್ ಸೇರಿ ಎರಡೂವರೆ ಸಾವಿರ ಮೌಲ್ಯದ ನಂದಿನಿ ಉತ್ಪನ್ನ ಖರೀದಿಸಿದರು. ನಂತರ ಅವುಗಳನ್ನು ಸ್ಥಳದಲ್ಲಿದ್ದವರಿಗೆ ಹಂಚಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಂದಿನಿ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹಾಗೇ ಕರ್ನಾಟಕದ ಹಾಲು ಉತ್ಪಾದಕರ ಪ್ರಶ್ನೆಯಾಗಿದೆ. ನಂದಿನಿ ಉಳಿಸಿಕೊಳ್ಳೋದು ಕರ್ನಾಟಕ ರೈತರ ಬದುಕಿನ ಪ್ರಶ್ನೆಯಾಗಿದೆ ಎಂದರು.































 
 

ಸುಮಾರು 80 ಲಕ್ಷ ರೈತರು ಹಾಲು ಉತ್ಪಾದನೆ‌ ಮಾಡುತ್ತಾರೆ. ಎಲ್ಲರೂ ಕೆಎಂಎಫ್​​ ಹಾಲು ಒಕ್ಕೂಟಕ್ಕೆ ಹಾಲು ಹಾಕುತ್ತಾರೆ, ರೈತರು ಕಟ್ಟಿದ ನಂದಿನಿ ಇದು. ಲೀಟರ್ ಗೆ 27-28 ರೂ ಕೊಡುತ್ತಾರೆ. ಸರ್ಕಾರ 5 ರೂಪಾಯಿ ಸಹಾಯಧನ ಕೊಡುತ್ತಿದೆ. ಅಮುಲ್ ಗುಜರಾತ್​​ನದ್ದು, ಅದು ಕೂಡ ರೈತರದ್ದು ನಮ್ಮದೇನು ತಕರಾರಿಲ್ಲ. ಆದರೆ ನಮ್ಮನ್ನು ಹಿಂದಕ್ಕೆ ಹಾಕಿ, ಅದನ್ನು ಮುಂದೆ ಮಾಡುತ್ತಿರೋದು ಸರ್ಕಾರದ ಕ್ರಮ‌ ಸರಿಯಿಲ್ಲ. ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು ಎಂದು ಹೇಳಿದರು.

ನಮ್ಮ ರೈತರು ಬೆಲೆ ಏರಿಕೆ ನಡುವೆ ಹಾಲು ಉತ್ಪಾದನೆ ಮಾಡುತ್ತಾರೆ ಅವರಿಗೆ ಸರ್ಕಾರ ಏನೂ ಸಹಾಯ ಮಾಡಿಲ್ಲ. ನಮ್ಮ ಹಾಲನ್ನೇ ಮಾರಾಟ ಮಾಡಲು ಅಗುತ್ತಿಲ್ಲ. ಹಾಗಾಗಿ ನಾವೇ ಪ್ರೊತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಬೇಕು. ಹಾಲಿನ ಉತ್ಪನ್ನಗಳಾದ ಮೈಸೂರು ಪಾಕ್, ಪೆಡಾ, ಬಿಸ್ಕೆಟ್, ಚಾಕಲೇಟ್​​ನ್ನು ಪಕ್ಷದ ಅಧ್ಯಕ್ಷನಾಗಿ ಖರೀದಿ ಮಾಡಿದ್ದೇನೆ. ನಮ್ಮ ರೈತರನ್ನು ಉಳಿಸಿಕೊಳ್ಳಬೇಕು, ನಮ್ಮ ನಂದಿನಿಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top