ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಪರ ಕಾರ್ಯಕರ್ತರ ಒಲವು ಮತ್ತೆ ಹೆಚ್ಚಾಗಿದೆ. ಪಕ್ಷ ಸಂಜೀವ ಮಠಂದೂರು ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ, ಗೆಲುವಿಗಾಗಿ ಶ್ರಮ ಹಾಕುತ್ತೇವೆ ಎಂದು ಉಪ್ಪಿನಂಗಡಿ ಭಾಗದ ಬಿಜೆಪಿ ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಲ್ಲಸಲ್ಲದ ಅಪವಾದಗಳನ್ನು ಹಾಕಿ, ಮತದಾರರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸಂಜೀವ ಮಠಂದೂರು ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ, ಈ ರೀತಿಯಲ್ಲಿ ತೇಜೊವಧೆ ಮಾಡುವುದು ತರವಲ್ಲ. ಓರ್ವ ಶಾಸಕನಾಗಿ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಪಕ್ಷಕ್ಕಾಗಿ ತನ್ನ ಪೂರ್ಣ ಸಮಯವನ್ನು ನೀಡಿದ್ದಾರೆ. ಹಾಗಿದ್ದರೂ, ಅವರನ್ನು ಅವಹೇಳನ ಮಾಡುವ ಕೆಲಸ ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ.
ನಮ್ಮ ಜಿಲ್ಲೆಯ ಮತದಾರರು ಬುದ್ಧಿವಂತರು, ವಿವೇಚನೆಯುಳ್ಳವರು. ಈ ಎಲ್ಲಾ ಷಡ್ಯಂತ್ರಗಳನ್ನು ಅರ್ಥ ಮಾಡಿಕೊಳ್ಳಬಲ್ಲವರು. ಶಾಸಕರಾಗಿ ಸಂಜೀವ ಮಠಂದೂರು ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ, ಬೆಂಬಲ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಎಪಿಎಂಸಿ ರೈಲ್ವೇ ರಸ್ತೆಯ ಅಂಡರ್ ಪಾಸ್ ಕನಸಾಗಿಯೇ ಉಳಿದಿತ್ತು. ಅದನ್ನು ನನಸು ಮಾಡಿದವರು ಸಂಜೀವ ಮಠಂದೂರು ಅವರು. ಇದರೊಂದಿಗೆ ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಮೇಲ್ಸೆತುವೆಯ ಕನಸು ನನಸಾಗುವ ಹಂತದಲ್ಲಿದೆ. ಎಸ್ಪಿ ಕಚೇರಿ ಪುತ್ತೂರಿಗೆ ಬರಲು ಬೇಕಾದ ಅವಶ್ಯಕತೆಗಳನ್ನು ಪೂರೈಸುವತ್ತಲೂ ಸಾಕಷ್ಟು ಕಾರ್ಯಗಳನ್ನು ಈಗಾಗಲೇ ಪೂರೈಸಿದ್ದಾರೆ. ಪುತ್ತೂರು ಜಿಲ್ಲಾಕೇಂದ್ರವಾಗುವ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜಿಗೆ ಜಾಗ, ಸರಕಾರಿ ಆಸ್ಪತ್ರೆ ಮೇಲ್ದೆರ್ಜೆಗೇರಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಅಂಬೇಡ್ಕರ್ ಭವನಕ್ಕೆ ಜಾಗ ಕಾದಿರಿಸಿದ್ದು, 2 ಕೋಟಿ ರೂ.ನ ಬೃಹತ್ ಭವನ ನಿರ್ಮಾಣವಾಗಲಿದೆ. ಗ್ರಾಮಾಂತರದಲ್ಲೂ ಅಂಬೇಡ್ಕರ್ ಭವನ ನಿರ್ಮಾಣವಾಗಿದೆ. ಗ್ರಾಮಾಂತರ ಭಾಗದ ರಸ್ತೆಗಳು, ಮೂಲಸೌಕರ್ಯಗಳನ್ನು ಪೂರೈಸುವತ್ತಲೂ ಶತಾಯಗತಾಯ ಪ್ರಯತ್ನಿಸಿದ್ದಾರೆ. ಹೀಗಿರುವಾಗ, ಸಂಜೀವ ಮಠಂದೂರು ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರನ್ನು ಗೆಲ್ಲಿಸುತ್ತವೆ. ಮತದಾರರು ಅವರನ್ನು ಹರಸಲಿದ್ದಾರೆ ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸಂಜೀವ ಮಠಂದೂರು ಅವರ ಹೆಸರನ್ನು ತಪ್ಪಿಸಬೇಕೆಂದು ಇಲ್ಲಸಲ್ಲದ ಅಪವಾದಗಳನ್ನು ಮಾಡಲಾಗುತ್ತಿದೆ. ಅದರಲ್ಲಿ ಹುರುಳಿಲ್ಲ. ಮಾತ್ರವಲ್ಲ, ಚುನಾವಣೆ ಬರುವ ಸಂದರ್ಭದಲ್ಲೇ ಇಂತಹ ಗಿಮಿಕ್ ಗಳನ್ನು ಮಾಡುತ್ತಾರೆ ಎಂದರೆ ಅರ್ಥವೇನು? ಹಾಗಾಗಿ, ಮತದಾರರು ಇದನ್ನು ಅರ್ಥವಿಸಿಕೊಂಡಿದ್ದಾರೆ. ಖಂಡಿತಾ, ಸಂಜೀವ ಮಠಂದೂರು ಪರ ಮತದಾರರು ನಿಲ್ಲುತ್ತಾರೆ. ಅವರ ಗೆಲುವಿಗಾಗಿ ಕಾರ್ಯಕರ್ತರು ಶ್ರಮಿಸುತ್ತೇವೆ. ಪಕ್ಷವೂ ಅವರ ಮೇಲೆ ನಂಬಿಕೆ ಇಟ್ಟಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.