ಸಂಚಲನ ಸೃಷ್ಟಿಸಿದ ಕಾಂಗ್ರೆಸ್ ಮಾಜಿ ನಾಯಕ ಗುಲಾಮ್ ನಬಿ ಆಜಾದ್ ಆರೋಪ
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಇಡೀ ಕುಟುಂಬ ವ್ಯಾಪಾರಿಗಳೊಂದಿಗೆ ಸಂಬಂಧ ಹೊಂದಿದೆ. ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲ ಕೆಲವು ಅನಪೇಕ್ಷಿತ ಉದ್ಯಮಿಗಳನ್ನು ಭೇಟಿ ಮಾಡುತ್ತಾರೆ ಎಂದು ಕಾಂಗ್ರೆಸಿನ ಮಾಜಿ ನಾಯಕ ಗುಲಾಮ್ ನಬಿ ಆಜಾದ್ ಆರೋಪಿಸಿದ್ದಾರೆ.
ಉದ್ಯಮಿ ಗೌತಮ್ ಅದಾನಿ ವಿಚಾರವನ್ನು ಹಿಡಿದುಕೊಂಡು ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ರಾಹುಲ್ ಗಾಂಧಿ ಮೇಲೆರಗಲು ಬಿಜೆಪಿಗೆ ಆಜಾದ್ ಬಹಿರಂಗಪಡಿಸಿರುವ ವಿಷಯ ಅಸ್ತ್ರವೊದಗಿಸಿದೆ.
ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಜಾದ್, ರಾಹುಲ್ ಗಾಂಧಿಯ ವಿದೇಶ ಪ್ರಯಾಣಗಳ ರಹಸ್ಯವನ್ನು ಬಯಲುಗೊಳಿಸಿದ್ದಾರೆ. ಇದರ ಬೆನ್ನಿಗೆ ರಾಹುಲ್ ಗಾಂಧಿ ಮೇಲೆರಗಿರುವ ಬಿಜೆಪಿ ಈ ಬಗ್ಗೆ ರಾಹುಲ್ ಗಾಂಧಿಯಿಂದ ವಿವರಣೆ ಕೇಳಿದೆ.
ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಕಾಂಗ್ರೆಸ್ ಬಿಟ್ಟು ಹೋದ ಪ್ರಮುಖ ನಾಯಕರಿಗೆ ಅದಾನಿ ಜತೆ ಸಂಪರ್ಕ ಕಲ್ಪಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿ ಆಜಾದ್ ವಿದೇಶ ಪ್ರಯಾಣಗಳ ರಹಸ್ಯ ಬಿಚ್ಚಿಟ್ಟಿದ್ದಾರೆ. ಇದೇ ಟ್ವೀಟ್‌ಗೆ ಸಂಬಂಧಿಸಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಶರ್ಮ ಬಿಸ್ವಾಸ್ , ರಾಹಲು ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
ನಾನು ಯಾವ ಉದ್ಯಮಿಯ ಜತೆಗೂ ಸಂಬಂಧ ಹೊಂದಿಲ್ಲ. ಆದರೆ ರಾಹುಲ್ ಗಾಂಧಿ ಮತ್ತು ಅವರ ಇಡೀ ಕುಟುಂಬ ಹಲವು ಉದ್ಯಮಿಗಳ ನಂಟು ಹೊಂದಿದೆ. ರಾಹುಲ್ ವಿದೇಶಕ್ಕೆ ಹೋದಾಗಲೆಲ್ಲ ಕೆಲವು ಅನಪೇಕ್ಷಿತ ಉದ್ಯಮಿಗಳನ್ನು ಭೇಟಿ ಮಾಡುತ್ತಾರೆ ಎಂದು ಎಂದು ಆಜಾದ್ ಸಂದರ್ಶನದಲ್ಲಿ ಹೇಳಿದ್ದಾರೆ.