ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಯಾಣಿಸುತ್ತಿದ್ದ ಕಾರು
ಬೆಳ್ತಂಗಡಿ : ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಕಾರು ಕಂದಕಕ್ಕೆ ಉರುಳಿ ಬಿದ್ದು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆಯ ಸಂಬಂಧಿಕ ಮಹಿಳೆಯೋರ್ವರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿಯವರು ಕುಟುಂಬದ ಜತೆ ಕೊಪ್ಪದಲ್ಲಿ ಅಂತ್ಯಕ್ರಿಯೆಯೊಂದರಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದಾಗ ಚಾರ್ಮಾಡಿಯ ಎರಡನೇ ತಿರುವಿನಲ್ಲಿ ಕಾರು ಬ್ರೇಕ್ ಫೈಲ್ ಆಗಿ ಸುಮಾರು 100 ಅಡಿ ಆಳದ ಕಂದಕಕ್ಕೆ ಉರುಳಿದೆ.
ಅಪಘಾತದಲ್ಲಿ ಪುಷ್ಪಾವತಿ ಆರ್. ಶೆಟ್ಟಿ, ಅವರ ಪುತ್ರಿ ಪೂರ್ಣಿಮಾ, ಮೊಮ್ಮಕ್ಕಳಾದ ಸಮೃದ್ಧ್, ಸಾಕ್ಷಿ ಹಾಗೂ ಸಂಬಂಧಿಕ ಮಹಿಳೆ ಸರೋಜಿನಿ (55) ಮತ್ತು ಕಾರಿನ ಚಾಲಕ ಗಾಯಗೊಂಡಿದ್ದರು. ಮಂಗಳೂರಿನ ಆಸ್ಪತ್ರೆಗೆ ಕರೆತರುವಾಗ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದ ಸರೋಜಿನಿ ಶೆಟ್ಟಿಯವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪುಷ್ಪಾವತಿಯವರ ಕೈಗೆ ಗಾಯವಾಗಿದೆ. ಉಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅವರನ್ನು ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.