ಒಂದೇ ಪಟ್ಟಿಯಲ್ಲಿ 175 ಅಭ್ಯರ್ಥಿಗಳ ಹೆಸರು
ಬೆಂಗಳೂರು : ಆಡಳಿತರೂಢ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಇಂದು ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ನಿನ್ನೆ ತಡರಾತ್ರಿ ವರೆಗೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಒಂದೇಟಿಗೆ 175 ಅಭ್ಯರ್ಥಿಗಳ ಪಟ್ಟಿಯನ್ನ ರೆಡಿ ಮಾಡಿದ್ದಾರೆ. ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು.? ಬಂಡಾಯ ಶಮನ ಮಾಡುವುದು ಹೇಗೆ? ಸರ್ವೆ ರಿಪೋರ್ಟ್ ಏನು ಹೇಳುತ್ತದೆ ಹೀಗೆ ಎಲ್ಲವನ್ನೂ ಅಳೆದು ತೂಗಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದು, ಟಿಕೆಟ್ ಘೋಷಣೆಗೂ ಮುನ್ನ ಬಿಜೆಪಿ ನಾಯಕರು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.
ಇಂದು ದಿಲ್ಲಿಯಲ್ಲಿ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಾಯಕರು ಸುದ್ದಿಗೋಷ್ಟಿ ನಡೆಸಲಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಸದೀಯ ಮಂಡಳಿ ಸಭೆ ನಡೆದಿದ್ದು, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಂಬಂಧ ಸುದೀರ್ಘವಾಗಿ ಎರಡು ಗಂಟೆ ಕಾಲ ಚರ್ಚೆ ನಡೆದಿದೆ.15-20 ಹಾಲಿ ಶಾಸಕರು ಟಿಕೆಟ್ ಕಳೆದುಕೊಳ್ಳುವುದ ಖಚಿತ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಕೇಸರಿ ಪಾಳಯದಲ್ಲಿ ಕಂಪನ ಎದ್ದಿದ್ದು, ಯಾರಿಗೆ ಟಿಕೆಟ್ ಮಿಸ್ಸಾಗುತ್ತೋ ಎನ್ನುವ ತಳಮಳ ಶುರುವಾಗಿದೆ.