ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವಕ್ಕೆ “ಸ್ವಚ್ಛ ಜಾತ್ರೆ ಸ್ವಚ್ಛ ಪುತ್ತೂರು” ಎಂಬ ಕಲ್ಪನೆಯೊಂದಿಗೆ ಸ್ವಚ್ಛತಾ ಕಾರ್ಯ ಭಾನುವಾರ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಭಕ್ತಾದಿಗಳೊಂದಿಗೆ ಮೂರು ಬಾರಿ ಓಂಕಾರ ಹೇಳಿ ತೆಂಗಿನಕಾಯಿ ಒಡೆಯುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸ್ವಚ್ಛತೆ ಎಲ್ಲಿ ಇರುತ್ತದೋ ಅಲ್ಲಿ ದೇವರು ಇರುತ್ತಾರೆ. ಸ್ವಚ್ಛತಾ ಮನೋಭಾವದಿಂದ ದೇವಸ್ಥಾನದ ವಠಾರವನ್ನು ನಾವೆಲ್ಲರೂ ಸೇರಿಕೊಂಡು ಮುತುವರ್ಜಿ ವಹಿಸಿ ಕೆಲಸ ಮಾಡಿದರೆ ಸ್ವಚ್ಛತೆ ಆಗುತ್ತದೆ. ಪ್ರತಿವರ್ಷ ಜಾತ್ರೆಯ ಮೊದಲು ಮಾಡುವ ಸ್ವಚ್ಛತಾ ಕಾರ್ಯ ಸುಗಮವಾಗಿ ಸಾಗಲಿ ಎಂದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ, ರಾಮಚಂದ್ರ ಕಾಮತ್, ವಿವಿಧ ಸಂಘಟನೆಯವರು, ಭಕ್ತಾದಿಗಳು ಉಪಸ್ಥಿತರಿದ್ದರು.