ಬಂಡೀಪುರ : ಚುನಾವಣೆ ಹೊತ್ತಿನಲ್ಲಿ ಕರ್ನಾಟಕಕ್ಕೆ ನಿನ್ನೆ ಶನಿವಾರ ರಾತ್ರಿ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಇಂದು ಭಾನುವಾರ ಬೆಳ್ಳಂಬೆಳಗ್ಗೆ ಸಫಾರಿ ನಡೆಸಿದ ಪ್ರಧಾನಿ ಮೋದಿಯವರು ಬಂಡೀಪುರ ಕ್ಯಾಂಪ್ ನ, ವನ್ಯಜೀವಿ, ಅರಣ್ಯ ಸಂಪತ್ತಿನ ಸೌಂದರ್ಯ ಸವಿದರು.
ಇದೀಗ ಪ್ರಧಾನಿ ಮೋದಿಯವರು ಬಂಡೀಪುರ ಕ್ಯಾಂಪ್ ನಿಂದ ಬೋಳಗುಡ್ಡ ಆ್ಯಂಟಿ ಪೋಚಿಂಗ್ ಕ್ಯಾಂಪ್ ನತ್ತ ತೆರಳಿದ್ದು, ಬೋಳಗುಡ್ಡದಿಂದ ಅರಣ್ಯ ವೀಕ್ಷಿಸಿದ್ದಾರೆ. ನಂತರ ಮಧುಮಲೈ ಆನೆ ಶಿಬಿರಕ್ಕೆ ಭೇಟಿ ನೀಡಿದ್ದಾರೆ.
ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮೋದಿಯವರು ಇಂದು ಬೆಳಗ್ಗೆ ಬಂಡೀಪುರ ಅಭಯಾರಣ್ಯದಲ್ಲಿ ಸುಮಾರು 2 ಗಂಟೆಗಳ ಕಾಲ ಹುಲಿ ಸಫಾರಿಯಲ್ಲಿ ಭಾಗವಹಿಸಿ 20 ಕಿಲೋ ಮೀಟರ್ ಸಾಗಿ, ಹುಲಿ ವೀಕ್ಷಣೆಯನ್ನು ಮಾಡಿದರು.
ಬಂಡೀಪುರ ಕ್ಯಾಂಪ್ ನಲ್ಲಿ ಪ್ರಧಾನಿ ಮೋದಿಯವರಿಗೆ ಅರಣ್ಯಾಧಿಕಾರಿಗಳು ಸ್ವಾಗತ ಕೋರಿದರು. ತಮಿಳು ನಾಡಿನ ಮಧುಮಲೈನ ತೆಪ್ಪಕಾಡು ಆನೆ ಶಿಬಿರದಲ್ಲಿ, ದಿ ಎಲಿಫೆಂಟ್ ವಿಸ್ಬರ್ಸ್(Elephant whispers) ಖ್ಯಾತಿಯ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಪ್ರಧಾನಿಯವರನ್ನು ಭೇಟಿ ಮಾಡಿ, ಮೋದಿಯವರು ಅವರನ್ನು ಸನ್ಮಾನಿಸಿದ್ದಾರೆ. ಅಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಹೆಲಿಕಾಪ್ಟರ್ ನಲ್ಲಿ ಮೈಸೂರಿಗೆ ತೆರಳಿದ್ದಾರೆ.