ಬೆಂಗಳೂರು : ಕರ್ನಾಟಕದ ಕೆಎಂಎಫ್ ಮತ್ತು ಗುಜರಾತ್ ನ ಅಮುಲ್ ಸಂಸ್ಥೆಗಳ ವಿಲೀನವಿಲ್ಲ.. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಕೆಎಮ್‌ಎಫ್ ಎಮ್‌ಡಿ ಬಿ.ಸಿ ಸತೀಶ್ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲವು ದೇಶದ ಎರಡನೇ ಅತಿ ದೊಡ್ಡ ಸರ್ಕಾರಿ ಹಾಲು ಮಹಾಮಂಡಲ ಸಂಸ್ಥೆಯಾಗಿದ್ದು, 26 ಲಕ್ಷ ರೈತ ಕುಟುಂಬ ಹಾಗೂ ಕೋಟ್ಯಂತರ ಗ್ರಾಹಕರಿಂದ ಗಟ್ಟಿಯಾಗಿ ನೆಲೆಯೂರಿದ್ದು, ಮತ್ತೊಂದು ಸಹಕಾರ ಮಂಡಲದೊಂದಿಗೆ ವಿಲೀನ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾರೂ ಆತಂಕ ಪಡುವಂತಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ತಿಳಿಸಿದ್ದಾರೆ.
ನಂದಿನಿ ಬ್ರ್ಯಾಂಡ್ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ ಅವರು ಗ್ರಾಮೀಣ ರೈತರಿಂದ ಪ್ರತಿ ದಿನ ಸರಾಸರಿ 85 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಿ ಸುಮಾರು 160ಕ್ಕೂ ಹೆಚ್ಚು ವಿವಿಧ ನಂದಿನಿ ಮತ್ತು ಹಾಲಿನ ಉತ್ಪನ್ನಗಳನ್ನು ರಾಜ್ಯದ ಜನತೆಗೆ ನಾಲ್ಕು ವರ್ಷಗಳಿಂದಲೂ ಒದಗಿಸುತ್ತಾ ಬಂದಿದೆ. ಹಾಲಿನ ಶೇಖರಣೆಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಒಂದು ಕೋಟಿಗೂ ಅಕ ಲೀಟರ್ ಸಂಗ್ರಹಿಸುವ ಗುರಿ ಹೊಂದಲಾಗಿದೆ.ಕಳೆದ ಐದು ವರ್ಷಗಳ ಅವಯಲ್ಲಿ ಹಾಲಿನ ಸರಾಸರಿ ಶೇಖರಣೆ ಶೇ. 6ರಿಂದ ಶೇ. 7ರಷ್ಟು ಪ್ರಗತಿಯಲ್ಲಿದೆ. ಮಾರಾಟದಲ್ಲಿ ಶೇ. 25ರಷ್ಟು ಅಭಿವೃದ್ಧಿ ಸಾಧಿಸುತ್ತಾ ಬಂದಿದೆ. ದೇಶದ ವಿವಿಧ ರಾಜ್ಯಗಳಿಗೂ ತನ್ನ ಮಾರಾಟ ಜಾಲವನ್ನು ವಿಸ್ತರಿಸುತ್ತಾ ಗ್ರಾಹಕರ ನೆಚ್ಚಿನ ಬ್ರಾಂಡ್ ಆಗಿದ್ದು, ಹೀಗಿರುವಾಗ ನಮಗೆ ವಿಲೀನದ ಆವಶ್ಯಕತೆಯೇ ಇಲ್ಲ. ಗಾಳಿ ಸುದ್ದಿಗಳಿಗೆ ಕಿವಿ ಕೊಡಬೇಡಿ ಎಂದು ಸತೀಶ್ ತಿಳಿಸಿದರು.
ಕೆಎಂಎಫ್ ಹೆಚ್ಚುವರಿಯಾಗಿ ಹಾಲು ಉತ್ಪಾದನೆ ಮಾಡುವುದಕ್ಕಾಗಲಿ, ವ್ಯಾಪಾರ ವೃದ್ಧಿಗಾಗಲೀ ದೇಶದ ಯಾವುದೇ ಸಹಕಾರ ಸಂಸ್ಥೆ ಅಥವಾ ಹಾಲು ಉತ್ಪಾದನಾ ಮಹಾಮಂಡಲದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದಿಲ್ಲ. ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಬೆಲೆಯ ಮೂಲಕವೇ ಮನೆ ಮಾತಾಗಿರುವ ನಂದಿನಿ ಮತ್ತು ಹಾಲು ಇತರ ಹಾಲಿನ ಬ್ರ್ಯಾಂಡ್ಗಳೊಂದಿಗೆ ಪೈಪೋಟಿ ನೀಡುತ್ತಾ ಮಾರುಕಟ್ಟೆಯನ್ನು ವಿಸ್ತರಿಸಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಉತ್ಪನ್ನಗಳು ಮಹಾರಾಷ್ಟ್ರ, ಮುಂಬೈ, ಪುಣೆ, ಸೊಲ್ಲಾಪುರ ದೇಶದ ಮಧ್ಯ ಭಾಗವಾಗಿರುವ ವಿದರ್ಭ, ಹೈದ್ರಾಬಾದ್, ಚೆನ್ನೈ, ಕೇರಳ, ಗೋವಾದಲ್ಲಿ ಪ್ರತಿನಿತ್ಯ ಏಳು ಲಕ್ಷಕ್ಕೂ ಅಧಿಕ ಲೀಟರ್ ಹಾಲು ಮತ್ತು ಮೊಸರನ್ನು ಸ್ಥಳೀಯವಾಗಿ ಅಲ್ಲಿನ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.
ನಂದಿನಿ ಬ್ರ್ಯಾಂಡ್ ಅನ್ನು ದೇಶವ್ಯಾಪಿ ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಮಾರುಕಟ್ಟೆ ವಿಸ್ತೀರ್ಣದ ಬಗ್ಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. 26 ಲಕ್ಷ ರೈತರು 2 ಲಕ್ಷಕ್ಕೂ ಅಕ ಕಾರ್ಮಿಕರ ದುಡಿಮೆ, 6 ಕೋಟಿಗೂ ಅಕ ಗ್ರಾಹಕರ ಆರೈಕೆಯಿಂದ ಸಂಸ್ಥೆಯು ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಹಾಲು ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿದೆ. ಇಂತಹ ಸಂಸ್ಥೆಯ ಬಗ್ಗೆ ಪ್ರಸ್ತುತದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳಾಗಿದ್ದು, ಗ್ರಾಹಕರು ಆತಂಕ ಪಡುವ ಆವಶ್ಯಕತೆ ಇಲ್ಲ. ಎಂದಿನಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಿ ಪೊತ್ಸಾಹಿಸುವಂತೆ ಜನತೆಯಲ್ಲಿ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.