ಖರ್ಗೆಯನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ತಂತ್ರ : ಡಿಕೆಶಿ

ಕಾಂಗ್ರೆಸ್‌ ಮುಖ್ಯಮಂತ್ರಿ ರೇಸ್‌ ಇನ್ನಷ್ಟು ರಣರೋಚಕ

ಬೆಂಗಳೂರು : ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಬಯಸಿದರೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸಿನೊಳಗಿನ ಮುಖ್ಯಮಂತ್ರಿ ರೇಸ್‌ಗೆ ಹೊಸ ತಿರುವು ನೀಡಿದ್ದಾರೆ. ಅವರು ಉರುಳಿಸಿದ ಖರ್ಗೆ ದಾಳ ಖಂಡಿತ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ತಂತ್ರ ಎಂದು ಹೇಳಲು ವಿಶೇಷ ರಾಜಕೀಯ ಪಾಂಡಿತ್ಯದ ಅಗತ್ಯವಿಲ್ಲ.

ಕೆಲ ದಿನಗಳ ಹಿಂದೆಯಷ್ಟೇ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ಹೈಕಮಾಂಡ್‌ ಡಿಕೆಶಿಯನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಅಂದರೆ ಕಾಂಗ್ರೆಸ್‌ ಬಹುಮತ ಪಡೆದರೆ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಅವರು ಈ ಮೂಲಕ ಸಾರಿದ್ದರು. ಮುಖ್ಯಮಂತ್ರಿಯಾಗುವ ಕನಸು ಹೊತ್ತು ಹಗಲಿರುಳು ಓಡಾಡುತ್ತಾ ಬೆವರು ಹರಿಸುತ್ತಿರುವ ಶಿವಕುಮಾರ್‌ಗೆ ಸಿದ್ದರಾಮಯ್ಯನವರ ಈ ಹೇಳಿಕೆ ಉರಿ ತರಿಸಿತ್ತು. ಒಂದು ವೇಳೆ ಬಹುಮತ ಬಂದು ತನಗೆ ಮುಖ್ಯಮಂತ್ರಿ ಪಟ್ಟ ಸಿಗದಿದ್ದರೂ ಪರವಾಗಿಲ್ಲ, ತನ್ನ ಬಗ್ಗೆ ಬಹಳ ಸಾಫ್ಟ್‌ ಕಾರ್ನರ್‌ ಹೊಂದಿರುವ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಬಹುದು ಎಂದು ಹೇಳುವ ಮೂಲಕ ಈಗ ಅವರು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಖರ್ಗೆ ಅವರು ಏನು ಇಚ್ಛೆ ಪಡುತ್ತಾರೋ, ಅದನ್ನು ಈಡೇರಿಸುವ ಕೆಲಸ ನನ್ನದು. ಅವರು ಸಿಎಂ ಆಗಲು ಬಯಸಿದರೆ ಅವರೊಟ್ಟಿಗೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ಅವರ ಹಿರಿತನ, ತ್ಯಾಗವನ್ನು ಗೌರವಿಸುತ್ತೇನೆ ಎಂದಿದ್ದಾರೆ ಡಿಕೆಶಿ. ಅಂದರೆ ಕಾಂಗ್ರೆಸ್‌ ಗೆದ್ದರೆ ನಿಮ್ಮನ್ನು ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ ಎಂದು ನೇರವಾಗಿಯೇ ಸಿದ್ದರಾಮಯ್ಯನವರಿಗೆ ಹೇಳಿದ್ದಾರೆ.



































 
 

ಖರ್ಗೆ ಅವರು ನನ್ನ ನಾಯಕರು, ಅವರೇ ನನ್ನ ಅಧ್ಯಕ್ಷರು ಮತ್ತು ನನಗಿಂತ 20 ವರ್ಷಗಳ ಹಿರಿಯರು. ಅವರು ರಾಜ್ಯ ಮತ್ತು ದೇಶದ ಆಸ್ತಿ. ಪಕ್ಷ ಯಾವ ತೀರ್ಮಾನ ಮಾಡುತ್ತೋ, ಅದಕ್ಕೆ ನಾನು ಬದ್ಧವಾಗಿರುತ್ತೇನೆ. ಖರ್ಗೆ ಅವರು ಪಕ್ಷಕ್ಕಾಗಿ ಹಲವು ಸಂದರ್ಭಗಳಲ್ಲಿ ತ್ಯಾಗ ಮಾಡಿದ್ದಾರೆ. ಪಕ್ಷದ ಒತ್ತಾಸೆಯಂತೆ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಧ್ಯರಾತ್ರಿ ರಾಜೀನಾಮೆ ಕೊಟ್ಟರು. ತಮ್ಮ ಬದ್ಧತೆ ಮತ್ತು ಪರಿಶ್ರಮದಿಂದ ಬ್ಲಾಕ್‌ ಮಟ್ಟದಿಂದ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೆ ಬೆಳೆದವರು. ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಬಯಸಿದರೆ, ಅವರ ಜತೆ ಕೆಲಸ ಮಾಡಲು ಸಂತೋಷ ಪಡುತ್ತೇನೆ ಎಂದು ಖರ್ಗೆಯನ್ನು ಹಾಡಿ ಹೊಗಳಿದ್ದಾರೆ.

ಕಾಂಗ್ರೆಸ್‌ ಬಹುಮತ ಪಡೆದುಕೊಳ್ಳುವುದು ನಿಶ್ಚಿತ ಎಂಬ ಭಾವನೆ ಡಿಕೆಶಿಯೂ ಸೇರಿದಂತೆ ಹಲವು ನಾಯಕರ ಮನಸ್ಸಿನಲ್ಲಿದೆ. ಈ ಪೈಕಿ ಡಿಕೆಶಿ ಮತ್ತು ಸಿದ್ದರಾಮಯ್ಯ ತಾವು ಸಿಎಂ ಪಟ್ಟದ ಹುರಿಯಾಳುಗಳು ಎಂದು ಬಹಳ ಹಿಂದೆಯೇ ಘೋಷಿಸಿಕೊಂಡಿದ್ದಾರೆ. ಆದರೆ ಭ್ರಷ್ಟಾಚಾರದ ತನಿಖೆ ಎದುರಿಸುತ್ತಿರುವ ಡಿಕೆಶಿಯನ್ನು ಮುಖ್ಯಮಂತ್ರಿ ಮಾಡಿದರೆ ರಾಷ್ಟ್ರಮಟ್ಟದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಅರಿವು ಕಾಂಗ್ರೆಸ್‌ ಹೈಕಮಾಂಡ್‌ಗೆ ಇದೆ. ಡಿಕೆಶಿ ಬಿಟ್ಟರೆ ಅಲ್ಲಿ ಉಳಿಯುವುದು ಸಿದ್ದರಾಮಯ್ಯ ಮಾತ್ರ. ಈ ಕಾರಣಕ್ಕೆ ಸಿದ್ದರಾಮಯ್ಯನವರು ಹೈಕಮಾಂಡ್‌ ಡಿಕೆಶಿಯನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿದ್ದು. ಅಂದರೆ ತನಗೇ ಮುಖ್ಯಮಂತ್ರಿ ಪಟ್ಟ ಸಿಗುತ್ತದೆ ಎಂದು ಅವರು ಪರೋಕ್ಷವಾಗಿ ಎಲ್ಲರಿಗೂ ಸಂದೇಶ ರವಾನಿಸಿದ್ದಾರೆ. ಹೊರಗೆ ಎಷ್ಟೇ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಫೋಸ್‌ ಕೊಟ್ಟರೂ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಹಸಿ ಹುಲ್ಲು ಹಾಕಿದರೂ ಭಗ್ಗನೆ ಹೊತ್ತಿಕೊಳ್ಳುವಂಥ ಸ್ಥಿತಿಯಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಿರುವಾಗ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಲು ಬಿಟ್ಟರೆ ತನಗೆ ಉಳಿಗಾಲವಿಲ್ಲ ಎಂದು ಲೆಕ್ಕಹಾಕಿ ಖರ್ಗೆಯವರ ಹೆಸರನ್ನು ತೇಲಿಬಿಟ್ಟಿದ್ದಾರೆ ಡಿಕೆಶಿ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top