ಇರಾನ್ನಲ್ಲಿ ಶಾಲಾ ಬಾಲಕಿಯರಿಗೆ ವಿಷವುಣ್ಣಿಸುತ್ತಿರುವ ಪ್ರಕರಣ ಹೆಚ್ಚಳ
ಟೆಹ್ರಾನ್: ಹಿಜಾಬ್ ವಿರೋಧಿ ಪ್ರತಿಭಟನೆಯಿಂದ ಕುಲುಮೆಯಂತಾಗಿರುವ ಇರಾನ್ನಲ್ಲಿ ಈಗ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಮಕ್ಕಳಿಗೆ ವಿಷವಿಕ್ಕುವ ಬರ್ಬರ ಕೃತ್ಯ ನಡೆಯುತ್ತಿದೆ. ಕೆಲವು ತಿಂಗಳುಗಳಿಂದ ಇರಾನ್ನಲ್ಲಿ ಬೆಚ್ಚಿ ಬೀಳಿಸಿರುವ ನಿಗೂಢ ವಿದ್ಯಮಾನಗಳು ನಡೆಯುತ್ತಿವೆ. ಶನಿವಾರ ಹಲವಾರು ಶಾಲೆಗಳಲ್ಲಿ ಬಾಲಕಿಯರಿಗೆ ನಿಧಾನ ವಿಷ ಪ್ರಾಷನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನವೆಂಬರ್ ಅಂತ್ಯದಿಂದ ಅನೇಕ ಶಾಲೆಗಳಲ್ಲಿ ಬಾಲಕಿಯರು ದಿಢೀರನೇ ವಿಷ ಪ್ರಾಷನ ಪ್ರಕರಣಕ್ಕೆ ಒಳಗಾಗುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ತೈಲ ಸಮೃದ್ಧ ನೈಋತ್ಯ ಪ್ರಾಂತ್ಯದ ಖುಜೆಸ್ಥಾನ್ನ ಹಾಫ್ಟ್ಕೆಲ್ ಪಟ್ಟಣದ ಬಾಲಕಿಯರ ಶಾಲೆಯಲ್ಲಿ ಕನಿಷ್ಠ 60 ವಿದ್ಯಾರ್ಥಿನಿಯರು ವಿಷ ಪ್ರಾಷನಕ್ಕೊಳಗಾಗಿದ್ದಾರೆ ದ್ದಾರೆ ಎಂದು ಐಆರ್ಐಬಿ ಸರ್ಕಾರಿ ನ್ಯೂಸ್ ಏಜೆನ್ಸಿ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಾಯವ್ಯದ ಅರ್ದಾಬಿಲ್ನಲ್ಲಿರುವ ಐದು ಶಾಲೆಗಳಲ್ಲಿ ಹಲವಾರು ಶಾಲಾಮಕ್ಕಳು ವಿಷ ಸೇವಿಸಿದ್ದು, ಆತಂಕ, ಉಸಿರಾಟದ ತೊಂದರೆ ಮತ್ತು ತಲೆ ನೋವು ಕಂಡುಬಂದಿದೆ ಎಂದು ಪ್ರಾಂತೀಯ ವೈದ್ಯಕೀಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಾ.7 ರಂದು ಬಹಿರಂಗವಾದ ಮಾಹಿತಿ ಪ್ರಕಾರ ಇರಾನ್ನ 31 ಪ್ರಾಂತ್ಯಗಳ 230 ಶಾಲೆಗಳಲ್ಲಿ ಇಂತಹ ವಿಷ ಪ್ರಾಷನ ಪ್ರಕರಣ ವರದಿಯಾಗಿದ್ದು, 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿಷ ಪ್ರಾಷನಕ್ಕೆ ಒಳಗಾಗಿದ್ದಾರೆ.