ಪುತ್ತೂರು: ಭಾರತದಲ್ಲಿ ವಿದ್ಯಾಭ್ಯಾಸ ಪಡೆದು ವಿದೇಶಕ್ಕೆ ಹೋಗಿ ವೃತ್ತಿ ಜೀವನ ಸಾಗಿಸುವುದಕ್ಕಿಂತ ನಮ್ಮ ದೇಶದಲ್ಲೇ ಇದ್ದು ಉದ್ಯೋಗ ಪಡೆಯುವುದು ಉತ್ತಮ. ನಮ್ಮ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವುದರಲ್ಲಿ ನಮ್ಮ ಪಾತ್ರವು ಮುಖ್ಯ ಎಂದು ಮೈಸೂರಿನ ಸಿ.ಎಫ್.ಟಿ.ಆರ್.ಐ.ನ ಪೂರ್ವ ನಿರ್ದೇಶಕ ಹಾಗೂ ಹೆಸರಾಂತ ವಿಜ್ಞಾನಿ ಪದ್ಮಶ್ರೀ ಡಾ.ವಿಶ್ವೇಶ್ವರಯ್ಯ ಪ್ರಕಾಶ್ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ 2021-22ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಇಂಜಿನಿಯರಿಂಗ್ ಮತ್ತು ಎಂಬಿಎ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವೀಧರರಾದ ಅರ್ಹ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾವರ್ತನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.



ಹಲವಾರು ಪ್ರಶಸ್ತಿಗಳು ಬರುತ್ತದೆ. ಆದರೆ ನಮ್ಮ ಕೆಲಸಗಳನ್ನು ನಿಲ್ಲಿಸಬಾರದು. ಮನುಷ್ಯ ಮೊದಲು ಅಹಂ ಬಿಡಬೇಕು. ನಮ್ಮ ದೇಶದಲ್ಲಿ ಸಾಧನೆ ಮಾಡುವವರಿಗೆ ಅವಕಾಶಗಳು ಬಹಳಷ್ಟು ಇದೆ. ಅದನ್ನು ಬಳಸಿಕೊಳ್ಳುವ ಮನೋಭಾವವನ್ನು ನಾವು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರದೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಇದು ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ ಲ್ಯಾಮ್ ರಿಸರ್ಚ್ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಮ್ಯಾನೇಜರ್ ಆಗಿರುವ ಆಸ್ಟ್ರನ್ ಲೋಬೋ ಮಾತನಾಡಿ, ಮನುಷ್ಯರಿಗೆ ಜೀವನದಲ್ಲಿ ಮಾನವೀಯತೆ ಮತ್ತು ವಿನಮ್ರತೆ ಎಂಬುದು ತುಂಬಾ ಆವಶ್ಯಕ. ಯಾವುದೇ ಕೆಲಸವನ್ನು ಪ್ರೀತಿ ಇಟ್ಟು ಮಾಡಬೇಕು. ಆಗ ಮಾತ್ರ ಅದು ಫಲಕಾರಿಯಾಗಲು ಸಾಧ್ಯ. ನಾವು ಮಾಡುವ ಕೆಲಸದಲ್ಲಿ ಸ್ಪಷ್ಟತೆ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಸಮಾಜದಲ್ಲಿ ಒಳ್ಳೆಯದು – ಕೆಟ್ಟದು ಎರಡು ಇದೆ. ನಾವು ಒಳ್ಳೆಯದನ್ನು ಹುಡುಕಿ, ಒಳ್ಳೆಯ ಮಾರ್ಗದಲ್ಲಿ ಹೋಗಬೇಕು. ಜಗತ್ತಿನ ಎಲ್ಲಾ ದೇಶಗಳು ನಮ್ಮ ರಾಷ್ಟ್ರದತ್ತ ತಿರುಗಿ ನೋಡುತ್ತಿದೆ. ಆದ್ದರಿಂದ ನಮ್ಮ ದೇಶ ಎತ್ತರಕ್ಕೆ ಏರಬೇಕು. ಅದಕ್ಕೆ ನಮ್ಮ ಪಾತ್ರ ಏನು ಎಂಬುದನ್ನು ನಾವು ಯೋಚಿಸಬೇಕು. ಶ್ರದ್ದೆ, ಪ್ರಾಮಾಣಿಕತೆ ಎಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಭಾರತ ಮಾತೆಗೆ ಹಾಗೂ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಶೈಕ್ಷಣಿಕವಾಗಿ ವಿಶೇಷ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೂ ಇಂಜಿನಿಯರಿಂಗ್ ಮತ್ತು ಎಂಬಿಎ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಪ್ರಮಾಣ ಪತ್ರ ನೀಡಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಖಜಾಂಚಿ, ನಿರ್ದೇಶಕರು ಮತ್ತು ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಸ್ವಾಗತಿಸಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಮೋಹನ್ ಎ.ಜೆ. ವಂದಿಸಿದರು. ಮೂಲವಿಜ್ಞಾನ ವಿಭಾಗದ ಉಪನ್ಯಾಸಕಿ ಪ್ರೊ. ಸೌಜನ್ಯ ಹಾಗೂ ಎಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕಿ ಪ್ರೊ. ಪ್ರಭಾ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು.